ಬೆಂಗಳೂರು : ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಶಕ್ತಿಯಿಂದಲೇ ನಾನಿಂದು ಮುಖ್ಯಮಂತ್ರಿಯಾಗಿ ಜನಸೇವೆ ಸಲ್ಲಿಸಲು ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಕೆಪಿಸಿಸಿ ವತಿಯಿಂದ ಆಯೋಜಿಸಲಾಗಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ 135 ನೇ ಜನ್ಮ ದಿನಾಚರಣೆಯ ಅಂಗವಾಗಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೇವಲ ದಲಿತರಿಗೆ ಮಾತ್ರವಲ್ಲದೇ, ಇಡೀ ಜಗತ್ತಿನ ನಾಯಕರಾಗಿದ್ದರು. ಭಾರತಕ್ಕೆ ಅತ್ಯಂತ ಯೋಗ್ಯವಾದ ಸಂವಿಧಾನ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. 1950 ಜನವರಿ 26 ರಂದು ಭಾರತದ ಸಂವಿಧಾನ ಜಾರಿಗೆ ಬರಲಿದ್ದು, ವೈರುಧ್ಯತೆಯಿರುವ ಸಮಾಜಕ್ಕೆ ಕಾಲಿಡಲಿದ್ದೇವೆ. ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯ ಲಭಿಸಿದಾಗ ಮಾತ್ರ ರಾಜಕೀಯ ಸ್ವಾತಂತ್ರ್ಯ ಫಲಿಸುತ್ತದೆ ಎಂದಿದ್ದರು. ಒಬ್ಬ ವ್ಯಕ್ತಿ , ಒಂದು ವೋಟು, ಒಂದು ಮೌಲ್ಯ ಎಂದು ಸಂವಿಧಾನ ತಿಳಿಸಿದ್ದು, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವಗಳ ಮೇಲೆ ಸಂವಿಧಾನ ನಿಂತಿದೆ. ಸಂವಿಧಾನ ಜಾರಿಯಾಗಿ 76 ವರ್ಷಗಳು ಕಳೆದರೂ ಸಮಾಜದಲ್ಲಿನ ಅಸಮಾನತೆ ಹೋಗಿಲ್ಲ ಎಂದರು.
ಅಂದು ಆರ್ ಎಸ್ ಎಸ್ ನ ಮುಖವಾಣಿಯಾಗಿದ್ದ ಆರ್ಗನೈಸರ್ ಪತ್ರಿಕೆಯಲ್ಲಿ ಸಂವಿಧಾನವನ್ನು ವಿರೋಧಿಸಿದ್ದರು. ಆದರೆ ಈಗ ಆರ್ ಎಸ್ ಎಸ್ –ಬಿಜೆಪಿಯವರು ಅಂಬೇಡ್ಕರ್ ಅವರನ್ನು ಹೊಗಳುತ್ತಿದ್ದಾರೆ. ಅವರ ಸೋಲಿಗೆ ಕಮ್ಯುನಿಷ್ಟ್ ಪಕ್ಷದ ಎಸ್.ಎ.ಡಾಂಗೆ ಮತ್ತು ಹಿಂದುತ್ವ ನಾಯಕ ವಿ.ಡಿ.ಸಾರ್ವರ್ಕರ್ ರವರು ಕಾರಣರಾಗಿದ್ದರು ಎಂದು ಅಂಬೇಡ್ಕರ್ ರವರು ಬರೆದುಕೊಂಡಿದ್ದಾರೆ. ಆದರೆ ಚುನಾವಣೆಯಲ್ಲಿ ಅಂಬೇಡ್ಕರ್ ಅವರ ಸೋಲಿಗೆ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಬಿಜೆಪಿಯವರು ಸುಳ್ಳು ಹೇಳುತ್ತಾರೆ. ಬಿಜೆಪಿಯವರು ಎಂದಿಗೂ ಸ್ವಾತಂತ್ರ್ಯ ಹೋರಾಟದಲ್ಲಾಗಲೀ ಅಥವಾ ಸಂವಿಧಾನದ ಪರವಾಗಿರಲಿಲ್ಲ. ಆರ್ ಎಸ್ ಎಸ್ ಬಿಜೆಪಿಯವರು ಸಂವಿಧಾನ ವಿರೋಧಿಗಳು. ಆರ್ ಎಸ್ ಎಸ್ ಹೆಡ್ಗೆವಾರ್ ಅವರು ಎಂದಿಗೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಕಾಂಗ್ರೆಸ್ ಪಕ್ಷ ಹಾಗೂ ಅಂಬೇಡ್ಕರ್ ಅವರ ಹೋರಾಟದ ಫಲ ಎಂದರು.
ಭಾರತದ ಅಭಿವೃದ್ಧಿಯಲ್ಲಿ ಆರ್ ಎಸ್ ಎಸ್, ಬಿಜೆಪಿಯ ಕೊಡುಗೆಯಿಲ್ಲ. ದೇಶಕ್ಕೆ ಸ್ವಾತಂತ್ರ್ಯದ ಲಭಿಸುವ ಮುಂಚಿತವಾಗಿ ಮನುಸ್ಮೃತಿ ಜಾರಿಯಲ್ಲಿತ್ತು. ಚತುವರ್ಣ ವ್ಯವಸ್ಥೆಯನ್ನು ಹೋಗಲಾಡಿಸಲು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೋರಾಡಿದರು. ಹಿಂದೂಧರ್ಮದಲ್ಲಿದ್ದಂತಹ ಅಸ್ಪೃಶ್ಯತೆಗಳನ್ನು ಸುಧಾರಿಸಲು ಬಹಳ ಪ್ರಯತ್ನಿಸಿ, ಮನುಶಾಸ್ತ್ರವನ್ನು ಸುಟ್ಟರು. ಅವರು ಬಾಲ್ಯದಿಂದಲೇ ಅಸ್ಪೃಶ್ಯತೆಯ ಕರಾಳ ಅನುಭವ ಹೊಂದಿದ್ದ ಕಾರಣ, ದೀನ ದಲಿತರಿಗೆ ಸಮಾನ ಅವಕಾಶಗಳನ್ನು ಆಗುಮಾಡಿಸಲು ಪ್ರಯತ್ನಿಸಿದರು. ಎಲ್ಲ ಶೋಷಿತ ವರ್ಗದವರಿಗೂ ಸಮಾನ ಶಿಕ್ಷಣದ ಹಕ್ಕನ್ನು ಸಂವಿಧಾನ ನೀಡಿತು. ಸಂವಿಧಾನದ ಶಕ್ತಿಯಿಂದಲೇ ತಾನು ಇಂದು ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿದೆ ಎಂದು ಮುಖ್ಯಮಂತ್ರಿಯವರು ತಿಳಿಸಿದರು.





