ಬೆಂಗಳೂರು : ಶತಶತಮಾನಗಳಿಂದ ಬಹುಸಂಖ್ಯಾತ ಜನ ಅಕ್ಷರ ಸಂಸ್ಕೃತಿಯಿಂದ ವಂಚನೆಗೊಳಗಾಗಿದ್ದಾರೆ. ನಮ್ಮ ಇಡೀ ಊರಿನಲ್ಲಿ ಲಾಯರ್ ಆದವನು ನಾನು ಒಬ್ಬನೇ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಶಿಕ್ಷಣದ ಹಿಂದಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಕಾಳಿದಾಸ ಹೆಲ್ತ್ ಆಂಡ್ ಎಜುಕೇಶನ್ ಟ್ರಸ್ಟ್ ವತಿಯಿಂದ ವಸಂತ ನಗರದ ದೇವರಾಜ್ ಅರಸು ಭವನದಲ್ಲಿ ನಡೆದ ಪ್ರೇರಣಾ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದ ಸಿಎಂ, ನಮ್ಮ ಊರಲ್ಲಿ ಪದವೀಧರರು ಇದ್ದರು. ಆದರೆ ಲಾಯರ್ ಆಗಿದ್ದು ನಾನೇ. ನಮ್ಮ ಅಪ್ಪ ನಮ್ಮೂರು ಶಾನುಭೋಗರ ಮಾತು ಕೇಳುತ್ತಿದ್ದರು. ನನಗೆ ಎಂಎಸ್‌ಸಿ ಸೀಟು ಸಿಗಲಿಲ್ಲ. ಆಮೇಲೆ ವ್ಯವಸಾಯ ಮಾಡುತ್ತಿದ್ದೆ. ಅದಾದ ಬಳಿಕ ಲಾ ಓದೋಕೆ ಹೋಗಿದ್ದೆ ಎಂದು ತಿಳಿಸಿದರು.
ನಮ್ಮ ಅಪ್ಪನಿಗೆ ನಾನು ಲಾ ಮಾಡ್ತೀನಿ ಅಂತ ಹೇಳಿದ್ದೆ. ಆಗ ಅವರು ಶಾನುಭೋಗರ ಹತ್ತಿರ ಹೋಗಿ ಕೇಳಿದ್ದರು. ಆಗ ಶಾನುಭೋಗರು ಕುರುಬರು ಲಾಯರ್ ಕೆಲಸ ಮಾಡೋಕೆ ಆಗುತ್ತಾ? ಬೇಡ ಎಂದು ಹೇಳಿದ್ದರು. ಅವರ ಮಾತು ಕೇಳಿ ನಮ್ಮ ಅಪ್ಪ ನನಗೆ ಲಾಯರ್ ಮಾಡಬೇಡ ಎಂದು ಹೇಳಿದ್ರು. ಆದರೂ ಕೂಡಾ ನಾನು ಲಾಯರ್ ಓದಿದೆ. ಬಳಿಕ ಶಾನುಭೋಗರ ಆಸ್ತಿ ವಿಚಾರಕ್ಕೆ ನಾನೇ ಲಾಯರ್ ಆದೆ. ಆಗ ಶಾನುಭೋಗರು ಏನು ಮಾತಾಡದೇ ಸುಮ್ಮನೆ ಆದರು ಎಂದು ಸಿಎಂ ತಮ್ಮ ಲಾ ಜೀವನದ ನೆನಪನ್ನು ಬಿಚ್ಚಿಟ್ಟರು.