ಬೆಂಗಳೂರು : ಕುಮಾರಸ್ವಾಮಿಯವರು ರಾಜಕಾರಣದ ಬಗ್ಗೆ ಬಹಿರಂಗ ಚರ್ಚೆಗೆ ನಾನು ಸಿದ್ಧನಿದ್ದೇನೆ. ಇಷ್ಟು ದಿನ ಮೌನವಾಗಿ ಸಹಿಸಿಕೊಂಡಿದ್ದೆ. ಆದರೆ ಈಗ ಮಾತನಾಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಷ್ಟು ದಿನ ಕುಮಾರಸ್ವಾಮಿಯವರ ವಿರುದ್ಧ ಮಾತನಾಡಬೇಡಿ ಎಂದು ನನ್ನನ್ನು ತಡೆಯಲಾಗಿತ್ತು. ನಾನು ಅದಕ್ಕಾಗಿಯೇ ಸುಮ್ಮನಿದ್ದೆ. ಆದರೆ ಇನ್ನು ಈ ರೀತಿ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕುಮಾರಸ್ವಾಮಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮೀರ್ಸಾದಿಕ್ ಎಂದು ಕರೆದಿದ್ದಾರೆ. ಈ ವಿಷಯದಲ್ಲಿ ಅವರು ಡಾಕ್ಟರೇಟ್ ಪಡೆದಂತೆ ಕಾಣುತ್ತಿದೆ. ಮೈತ್ರಿ ಸರ್ಕಾರ ಪತನಗೊಳಿಸಿದ ಬಗ್ಗೆ ಇಷ್ಟು ದಿನ ನನ್ನ ವಿರುದ್ಧ ಆರೋಪ ಮಾಡುತ್ತಿದ್ದರು. ಈಗ ಸಿದ್ದರಾಮಯ್ಯ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ನಾವು ಕುಮಾರಸ್ವಾಮಿಯವರಿಗೆ ಬೆಂಬಲ ನೀಡಿದ್ದೆವು. ಅದನ್ನು ಇವರಿಂದ ಉಳಿಸಿಕೊಳ್ಳಲಾಗಿಲ್ಲ. ಸಮ್ಮಿಶ್ರ ಸರ್ಕಾರ ತೆಗೆಯಲು ಹಗಲು, ರಾತ್ರಿ ಶ್ರಮಪಟ್ಟವರ ಜೊತೆ ಈಗ ಕುಮಾರಸ್ವಾಮಿ ತಬ್ಬಾಡುತ್ತಿದ್ದಾರೆ ಎಂದು ಆರೋಪಿಸಿದರು.
ಒಬ್ಬರು ಬೆಳಗಾವಿಯರು, ಮತ್ತೊಬ್ಬರು ಚನ್ನಪಟ್ಟಣದವರು ಸೇರಿ ಕುಮಾರಸ್ವಾಮಿ ಸರ್ಕಾರವನ್ನು ತೆಗೆದರು. ಈಗ ಅವರ ಜೊತೆಯೇ ಕುಮಾರಸ್ವಾಮಿಯವರು ಹೋಗುತ್ತಿದ್ದಾರೆ. ಇವರಿಗೆ ಯಾವ ಮೌಲ್ಯವಿದೆ, ಮಾನವೀಯತೆ ಇದೆಯೇ ಎಂದು ಪ್ರಶ್ನಿಸಿದರು.
ಸರ್ಕಾರ ಉಳಿಸಿಕೊಳ್ಳಬೇಕಿತ್ತು. ಉಳಿಸಿಕೊಳ್ಳಬೇಡಿ ಎಂದು ಯಾರೂ ಹೇಳಿರಲಿಲ್ಲ. ಅಂದು ಕಿತ್ತಾಡಿದವರ ಜೊತೆಯೇ ಇಂದು ನೆಂಟಸ್ತನ ಮಾಡುತ್ತಿದ್ದಾರೆ. ಕುಮಾರಸ್ವಾಮಿ, ಯಡಿಯೂರಪ್ಪ ಹಾಗೂ ಪ್ರಹ್ಲಾದ್ ಜೋಷಿ ನಡುವೆ ಯಾವ ರೀತಿಯ ವಾದ, ವಿವಾದಗಳು ನಡೆದವು ಎಂದು ಜನ ನೋಡಿದ್ದಾರೆ. ಪ್ರಸ್ತುತ ರಾಜಕೀಯ ಬೆಳವಣಿಗೆಯ ಬಗ್ಗೆ ಮುಕ್ತ ಚರ್ಚೆಯಾಗುವುದಾದರೆ ನಾನು ಸಿದ್ಧ. ಇದು ಮುಂದಿನ ಪೀಳಿಗೆಗೂ ತಿಳಿಯಬೇಕಿದೆ ಎಂದು ಹೇಳಿದರು.
ನಾನು ಯಾವುದೇ ವೈಯಕ್ತಿಕ ವಿಚಾರವನ್ನು ಚರ್ಚೆ ಮಾಡಲು ಬಯಸುವುದಿಲ್ಲ. ಆದರೆ ಪದೇ-ಪದೇ ಆರೋಪ ಮಾಡುವುದಾದರೆ ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧವಿದ್ದೇನೆ. ರಾಮನಗರವನ್ನು ವಿಭಾಗಿಸುವ ಉದ್ದೇಶ ನನಗಿಲ್ಲ. ಕುಮಾರಸ್ವಾಮಿಯವರು ಅದನ್ನು ಛಿದ್ರ ಮಾಡಲು ಹೊರಟಿರಬಹುದು. ನಾನು ಬೆಂಗಳೂರಿನ ಸ್ವರೂಪ ನೀಡಲು ಪ್ರಯತ್ನಿಸುತ್ತಿದ್ದೇನೆ. ಕೆಂಪೇಗೌಡರು ಎಲ್ಲೆಲ್ಲಿ ಗಡಿ ರೇಖೆ ನಿಗದಿ ಮಾಡಿದ್ದಾರೋ ಆ ಬಗ್ಗೆ ನಾನು ಮಾತನಾಡುತ್ತಿದ್ದೇನೆ ಎಂದು ತಿಳಿಸಿದರು.
ವೈಯಕ್ತಿಕವಾಗಿ ಆಸ್ತಿಮೌಲ್ಯ ಹೆಚ್ಚಿಸಿಕೊಳ್ಳುವ ಉದ್ದೇಶ ತಮಗಿಲ್ಲ. ಈ ಹಿಂದೆ ಬಂಗಾರಪ್ಪನವರು ನೀಡಿದ್ದ ನಿವೇಶನದ ಬೆಲೆ 90 ಸಾವಿರದಿಂದ 6 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಚನ್ನಪಟ್ಟಣ, ರಾಮನಗರ, ಕನಕಪುರ ಸೇರಿದಂತೆ ನಮ್ಮ ಭಾಗದ ಜನರಿಗೆ ಆಸ್ತಿಗಳನ್ನು ಮಾರಿಕೊಳ್ಳಬೇಡಿ ಎಂದು ತಿಳಿ ಹೇಳುವುದು ನನ್ನ ಕರ್ತವ್ಯ. ಕೆಂಪೇಗೌಡರು ಕಟ್ಟಿದ ಬೆಂಗಳೂರು ಹೆಸರನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಕುಮಾರಸ್ವಾಮಿಯವರು ರಾಮನಗರಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಮೊದಲು ಹೇಳಲಿ. ಅನಂತರ ನನ್ನ ಕೊಡುಗೆ ಬಗ್ಗೆ ಪ್ರಶ್ನೆ ಮಾಡಲಿ ಎಂದು ತಿರುಗೇಟು ನೀಡಿದರು.