ಶಿವಮೊಗ್ಗ : ನಾನೇನು ಸನ್ಯಾಸಿಯಲ್ಲ, ನನ್ನ ಹಕ್ಕು ಕೇಳುತ್ತಿದ್ದೇನೆ. ನಾನೂ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಎಂದು ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಮಂತ್ರಿ ಸ್ಥಾನ ನೀಡುವಂತೆ ಕಾಂಗ್ರೆಸ್ ಪಕ್ಷದ ರಾಜ್ಯ ಮತ್ತು ಕೇಂದ್ರ ನಾಯಕರಿಗೆ ಕೇಳಿದ್ದೇನೆ. ಹಾಗೆಯೇ ಪ್ರಬಲ ಆಕಾಂಕ್ಷಿ ಎಂಬುದನ್ನೂ ಮನದಟ್ಟು ಮಾಡಿದ್ದೇನೆ ಎಂದರು. ಮುಖ್ಯಮಂತ್ರಿ ಸ್ಥಾನದ ಗೊಂದಲವನ್ನು ಪರಿಹರಿಸುವುದರ ಜೊತೆಗೆ ಹೊಸಬರಿಗೆ ಸಚಿವ ಸ್ಥಾನ ನೀಡುವ ವಿಚಾರವನ್ನೂ ಹೈಕಮಾಂಡ್ ಶೀಘ್ರ ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಇದನ್ನು ಓದಿ: ರಾಜ್ಯ ಜಲಾನಯನ ಅಭಿವೃದ್ಧಿ ಇಲಾಖೆ ಇತರೆ ರಾಜ್ಯಗಳಿಗೆ ಮಾದರಿ : ಸಚಿವ.ಎನ್.ಚಲುವರಾಯಸ್ವಾಮಿ
ನನ್ನದು ಹೈಕಮಾಂಡ್ ಬಣ
ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ರಾಜ್ಯದಲ್ಲಿ ಗೊಂದಲವಿದೆ. ಇದರಿಂದ ಪಕ್ಷಕ್ಕೂ ಹಾನಿಯಾಗುತ್ತಿದೆ. ಕೇಂದ್ರದ ನಾಯಕರೇ ಈ ಸಮಸ್ಯೆ ಪರಿಹರಿಸಬೇಕು. ಸಹಿ ಸಂಗ್ರಹ ವಿಚಾರದಲ್ಲಿ ನನ್ನನ್ನು ಯಾರೂ ಸಂಪರ್ಕಿಸಿಲ್ಲ. ನಾನು ಯಾವುದೇ ಬಣದಲ್ಲಿ ಗುರುತಿಸಿಕೊಂಡಿಲ್ಲ. ನಾನು ಕಾಂಗ್ರೆಸ್ ಪಕ್ಷದ ನಿಜವಾದ ಬಣದಲ್ಲಿ ಇದ್ದೇನೆ. ನನ್ನದು ಹೈಕಮಾಂಡ್ ಬಣ ಎಂದರು.ಡಿ.ಕೆ.ಶಿವಕುಮಾರ್ ತಾವು ಮುಖ್ಯಮಂತ್ರಿ ಆಗಬೇಕು ಎಂದು ಕೇಳಿದ್ದಾರೆ. ಜಿ.ಪರಮೇಶ್ವರ ಅವರು ಸಹ ಸಿಎಂ ಸ್ಥಾನ ಕೇಳಿದ್ದಾರೆ. ಆದರೆ ಸಿಎಂ ಸ್ಥಾನ ಕೊಡುವುದು ಅಥವಾ ಬಿಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ರಾಷ್ಟ್ರೀಯ ನಾಯಕರು ತೀರ್ಮಾನಿಸಿದರೆ ಸಿಎಂ ಸಹ ಬದಲಾಗಬಹುದು, ಮಂತ್ರಿಗಳು ಕೂಡ ಬದಲಾಗಬಹುದು ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ರಾಜ್ಯ ನಿರ್ದೇಶಕ ಎಂ.ಶ್ರೀಕಾಂತ್ ಇದ್ದರು.





