- ಬೆಂಗಳೂರು- ಕಾಂಗ್ರೆಸ್ ಪಕ್ಷ ಮಹಿಳಾ ಮೀಸಲಾತಿಗೆ ವಿರೋಧ ಇಲ್ಲ. ಕೇಂದ್ರ ಸರ್ಕಾರ ಲೋಕಸಭೆಯ ಸ್ಥಾನಗಳ ಸಂಖ್ಯೆ ಹೆಚ್ಚಿಸುವುದನ್ನು ಮಹಿಳಾ ಮೀಸಲಾತಿಯೊಂದಿಗೆ ಜೋಡಿಸಿ, ಚರ್ಚೆಯಿಲ್ಲದೆ ಏಕಾಏಕಿ ಮಂಡನೆ ಮಾಡಿ, ಅಂಗೀಕರಿಸಲು ಮುಂದಾಗಿದ್ದರಿಂದ ಸೋಲುಂಟಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಮೊಟ್ಟ ಮೊದಲು ಮಹಿಳಾ ಮೀಸಲಾತಿ ವಿಧೇಯಕವನ್ನು ಸಂಸತ್‍ನಲ್ಲಿ ಮಂಡಿಸಿದ್ದೇ ಕಾಂಗ್ರೆಸ್ ಪಕ್ಷ. ಡಾ.ಮನಮೋಹನ್ ಸಿಂಗ್ ಪ್ರಧಾನಿಮಂತ್ರಿಯಾಗಿದ್ದಾಗ ಈ ಪ್ರಯತ್ನ ಮಾಡಲಾಗಿತ್ತು. ಹೀಗಾಗಿ ಕಾಂಗ್ರೆಸ್ ಮಹಿಳಾ ಮೀಸಲಾತಿಗೆ ವಿರೋಧ ಮಾಡುವ ಪ್ರಶ್ನೆಯೇ ಇಲ್ಲ ಎಂದರು.
- ಪ್ರಸ್ತುತ ಕೇಂದ್ರ ಸರ್ಕಾರ ಮಸೂದೆಯನ್ನು ಮಂಡಿಸಿದ ರೀತಿ ಸರಿ ಇರಲಿಲ್ಲ. ಲೋಕಸಭೆಯಲ್ಲಿ 543 ಸದಸ್ಯರ ಸಂಖ್ಯೆಯನ್ನು 850ಕ್ಕೆ ಹೆಚ್ಚಿಸುವ ತೀರ್ಮಾನವನ್ನು ಈ ಮಹಿಳಾ ಮೀಸಲಾತಿಯೊಂದಿಗೆ ಅಳವಡಿಸಿಕೊಳ್ಳಲಾಗಿತ್ತು. ಇದರ ಬಗ್ಗೆ ಚರ್ಚೆಯಾಗಬೇಕಿತ್ತು. ವಿರೋಧ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಳಿಕ ಸಂಸತ್‍ನಲ್ಲಿ ಮಂಡಿಸಬೇಕಿತ್ತು ಎಂದರು.
ಕಾಂಗ್ರೆಸ್ ಪಕ್ಷ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳು ಸಲಹೆ, ಸೂಚನೆ ನೀಡಲು ಸಿದ್ಧವಿದ್ದವು. ಆದರೆ ಯಾವುದೇ ಚರ್ಚೆ ಮಾಡದೆ, ಲೋಕಸಭೆಯ ಸ್ಥಾನಗಳನ್ನು ಹೆಚ್ಚಿಸುವ ನಿರ್ಣಯವನ್ನು ಮಹಿಳಾ ಮೀಸಲಾತಿಯೊಂದಿಗೆ ಜೋಡಿಸಿ ಅನುಷ್ಠಾನಕ್ಕೆ ತರಲು ಮುಂದಾಗಿದ್ದು ಸರಿಯಲ್ಲ. ಹೀಗಾಗಿಯೇ ಮಸೂದೆ 54 ಮತಗಳ ಅಂತರದಿಂದ ಸೋತಿದೆ ಎಂದರು.
ಮಹಿಳಾ ಮೀಸಲಾತಿಗೆ ಜಾರಿಯಾಗಲೇಬೇಕೆಂಬ ಬದ್ಧತೆ ಬಿಜೆಪಿಗೆ ಇದ್ದರೆ, ಮತ್ತೊಂದು ಬಾರಿ ವಿರೋಧ ಪಕ್ಷದವರ ಜೊತೆ ಚರ್ಚೆ ಮಾಡಿ ಸಲಹೆ ಸೂಚನೆ ಪಡೆದುಕೊಂಡು ಕ್ಷೇತ್ರಗಳ ಹೆಚ್ಚಳವನ್ನು ಇದರೊಂದಿಗೆ ಜೋಡಿಸದೇ ಪ್ರತ್ಯೇಕವಾಗಿ ಮಂಡಿಸಿದರೆ ಮಸೂದೆ ಅಂಗೀಕಾರಗೊಳ್ಳಬಹುದು ಎಂದು ಹೇಳಿದರು.
- ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಯವರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿರುವುದನ್ನು ಜನಪ್ರತಿನಿಧಿಯಾಗಿ ನಾವು ಪ್ರಶ್ನಿಸುವುದು ಸರಿಯಲ್ಲ. ನಾವು ನ್ಯಾಯಾಂಗದ ವ್ಯವಸ್ಥೆಯನ್ನು ಗೌರವಿಸಬೇಕು. ತೀರ್ಪು ಸರಿ ಅಥವಾ ತಪ್ಪು ಎಂಬುದನ್ನು ಮೇಲನವಿಯ ಮೂಲಕ ಪ್ರಶ್ನಿಸಲು ವಿನಯ್ ಕುಲಕರ್ಣಿಯವರಿಗೆ ಅವಕಾಶ ಇದೆ. ಅದನ್ನು ಅವರು ಮಾಡಬಹುದು. ಆದರೆ ಸಾರ್ವಜನಿಕ ವ್ಯಕ್ತಿಯಾಗಿ ನಾವು ಪ್ರಶ್ನಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಒಳ ಮೀಸಲಾತಿಗೆ ಸಂಬಂಧಪಟ್ಟಂತೆ ಸಂಪುಟದಲ್ಲಿ ಚರ್ಚೆ ಮಾಡಲಾಗಿದೆ. ರೋಸ್ಟರ್ ಪದ್ಧತಿಯಿಂದಾಗುವ ಅನ್ಯಾಯವನ್ನು ಸರಿಪಡಿಸಲು ಸರ್ಕಾರದ ಮುಖ್ಯಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ತಾಂತ್ರಿಕ ಸಮಿತಿಯನ್ನು ರಚಿಸಲಾಗಿದೆ. ಸಿಬ್ಬಂದಿ ಮತ್ತು ಆಡಳಿತಾ ಸುಧಾರಣೆ, ಸಮಾಜ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಮಿತಿಯ ಸದಸ್ಯರಾಗಿರುತ್ತಾರೆ.
ಒಳ ಮೀಸಲಾತಿಯ ವರದಿ ನೀಡಲು ಸಮಿತಿಗೆ ಒಂದು ವಾರ ಕಾಲಾವಕಾಶ ನೀಡಲಾಗಿದೆ. ಬಹುಶಃ ಮುಂದಿನ ಸಂಪುಟಕ್ಕೆ ವರದಿ ಮಂಡನೆಯಾಗುವ ಸಾಧ್ಯತೆ ಇದೆ. ಈಗಾಗಲೇ ಒಳ ಮೀಸಲಾತಿಯ ಸಂಬಂಧಪಟ್ಟಂತೆ ಕಾನೂನು ರೂಪಿಸಲಾಗಿದೆ. ನಾವ್ಯಾರೂ ಒಳ ಮೀಸಲಾತಿಗೆ ವಿರೋಧ ಇಲ್ಲ. ವೈಜ್ಞಾನಿಕವಾಗಿ ಮತ್ತು ಕಾನೂನಾತಕವಾಗಿ ಅದು ಜಾರಿಯಾಗಬೇಕು ಎಂದರು.
ಮುಖ್ಯಮಂತ್ರಿ ಅಸಹಾಯಕರಾಗಿದ್ದಾರೆ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರ ಹೇಳಿಕೆ ವೈಯಕ್ತಿಕ ಅಭಿಪ್ರಾಯ. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಅವರು ದೂರು ನೀಡುವುದಾದರೆ ನೀಡಲಿ ಎಂದು ಹೇಳಿದರು.
ಅಲ್ಪಸಂಖ್ಯಾತರು ಸದಾಕಾಲ ಕಾಂಗ್ರೆಸ್ಗೆ ಬೆನ್ನೆಲುಬಾಗಿರುತ್ತಾರೆ. ದಾವಣಗೆರೆಯ ಒಂದು ಕ್ಷೇತ್ರದ ಟಿಕೆಟ್‍ನಿಂದಾಗಿ ಇದು ಬದಲಾಗುತ್ತದೆ ಎಂದು ಯಾರಾದರೂ ಕಲ್ಪಿಸಿಕೊಂಡಿದ್ದರೆ, ಅದು ತಪ್ಪಾಗಲಿದೆ. ಕಾಂಗ್ರೆಸ್ ಮತ್ತು ಅಲ್ಪಸಂಖ್ಯಾತರ ನಡುವೆ ಸಹೋದರತ್ವ ಭಾವನೆ ಇದೆ. ಮುಂದೆಯೂ ಇರುತ್ತದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ವಿಚಾರವಾಗಿ ಅಸಮಾಧಾನವಿದ್ದರೆ ಅಧ್ಯಕ್ಷರ ಜೊತೆಗೂಡಿ ನಾವೆಲ್ಲಾ ಅದನ್ನು ಸರಿ ಪಡಿಸುತ್ತೇವೆ. ಅಲ್ಪಸಂಖ್ಯಾತರು ಕಾಂಗ್ರೆಸ್ ಜೊತೆ ಇರುತ್ತಾರೆ ಅವರ ಅಭಿವೃದ್ಧಿಗೆ ನಾವು ಬದ್ಧರಾಗಿರುತ್ತೇವೆ. ಇದು ಒಂದು ರೀತಿ ಕೊಟ್ಟು ತೆಗೆದುಕೊಳ್ಳುವ ವ್ಯವಸ್ಥೆ ಎಂದು ಹೇಳಿದರು





