ಹೈದರಾಬಾದ್: ತೆಲಂಗಾಣ ರಾಜ್ಯದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮಳೆ ಸಂಬಂಧಿತ ಅವಘಡಗಳಲ್ಲಿ ಇಲ್ಲಿಯವರೆಗೂ 16 ಮಂದಿ ಸಾವನ್ನಪ್ಪಿದ್ದು, ಹಲವರು ಪ್ರವಾಹದಲ್ಲಿ ಸಿಲುಕಿ ನಾಪತ್ತೆಯಾಗಿದ್ದಾರೆ.
ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ತೆಲಂಗಾಣದ ಹಲವೆಡೆ ಪ್ರವಾಹ ಪರಿಸ್ಥಿತಿ ಏರ್ಪಟ್ಟಿದ್ದು, ಜನತೆ ಕಂಗಾಲಾಗಿದ್ದಾರೆ.
ಮಳೆ ಅವಘಡಗಳಲ್ಲಿ ಮೃತರ ಸಂಬಂಧಿಗಳಿಗೆ ತಲಾ 5 ಲಕ್ಷ ಪರಿಹಾರ ಘೋಷಿಸಲಾಗಿದೆ ಎಂದು ಸಿಎಂ ರೇವಂತ್ ರೆಡ್ಡಿ ತಿಳಿಸಿದ್ದಾರೆ.
ಅಲ್ಲದೆ, ಪ್ರವಾಹದಿಂದ ಉಂಟಾಗಿರುkವ ಹಾನಿ ಕುರಿತಂತೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ವರದಿ ಸಲ್ಲಿಸಲಿದೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ.
ದನಕರುಗಳು, ಮೇಕೆ ಹಾಗೂ ಕುರಿಗಳನ್ನು ಕಳೆದುಕೊಂಡ ರೈತರಿಗೂ ಪರಿಹಾರ ನೀಡಲಾಗುವುದು ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ತೆಲಂಗಾಣದ ಹಲವೆಡೆ ಪ್ರವಾಹ ಪರಿಸ್ಥಿತಿ ಊಂಟಾಗಿದ್ದು, ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಕೇಂದ್ರವನ್ನು ಒತ್ತಾಯಿಸಲು ರೇವಂತ್ ರೆಡ್ಡಿ ನಿರ್ಧಾರ ಮಾಡಿದ್ದಾರೆ.
ಇದೆಲ್ಲದರ ನಡುವೆ ಧಾರಾಕಾರ ಮಳೆಯಾಗುತ್ತಿರುವ ಜಿಲ್ಲೆಗಳಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದ್ದು, ಕಾಲ್ ಸೆಂಟರ್‌ಗಳನ್ನು ತೆರೆಯುವಂತೆ ಸೂಚಿಸಲಾಗಿದೆ.
ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನತೆಯನ್ನು ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡಲಾಗಿದ್ದು, ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.