ಬೆಂಗಳೂರು: ಹಠಾತ್ ಸಾವಿಗೆ ಕಾರಣವಾಗುವ ಹೃದ್ರೋಗವನ್ನು ಅಧಿಸೂಚಿತ ಕಾಯಿಲೆ ಎಂದು ರಾಜ್ಯ ಸರ್ಕಾರ ಘೋಷಿಸುತ್ತಿದ್ದು, ಹೃದಯ ಸಂಬಂಧದ ಕಾಯಿಲೆಗಳನ್ನು ತಪ್ಪಿಸಲು ಶಾಲೆಗಳಲ್ಲಿ ಸರ್ಕಾರಿ ನೌಕರರು, ಗುತ್ತಿಗೆ ನೌಕರರಿಗೆ ವಾರ್ಷಿಕ ನಿಯಮಿತ ತಪಾಸಣೆಗೆ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೃದಯಾಘಾತಗಳಿಗೆ ಜನರ ಜೀವನಶೈಲಿ ಕಾರಣವಾಗಿದೆ. ಕೋವಿಡ್ ಲಸಿಕೆಯೇ ಹೃದಯಾಘಾತಕ್ಕೆ ಕಾರಣ ಎಂದು ಎಲ್ಲಿಯೂ ತಿಳಿದುಬಂದಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಬಗ್ಗೆ ಅಧ್ಯಯನ ನಡೆದಿದೆ. ಲಸಿಕೆಯಿಂದ ಜನರಿಗೆ ಒಳ್ಳೆಯದಾಗಿದೆ. ಬಹಳಷ್ಟು ಜನರ ಜೀವ ಉಳಿದಿದೆ ಎಂದು ಸ್ಪಷ್ಟಪಡಿಸಿದರು.
ಚಿಕ್ಕವಯಸ್ಸಿನವರಲ್ಲಿ ದಿಢೀರ್ ಹೃದಯಾಘಾತವಾಗುತ್ತಿವೆ. ನಡೆದು ಹೋಗುವಾಗ, ವ್ಯಾಯಾಮ ಮಾಡುವಾಗ ಹಠಾತ್ ಮರಣಗಳಾಗುತ್ತಿವೆ. ಅವುಗಳ ಬಗ್ಗೆ ಹೆಚ್ಚಿನ ಗಮನ ಕೊಡಬೇಕು ಎಂದು ತಜ್ಞರ ಸಮಿತಿ ಹೇಳಿದೆ. ಸಮಿತಿಯ ಶಿಫಾರಸು ಆಧಾರದ ಮೇಲೆ ಸರ್ಕಾರ ಕೆಲ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದರು.
ಆಸ್ಪತ್ರೆಯ ಹೊರಗಡೆ ಹಠಾತ್ ಮರಣಗಳನ್ನು ಅಧಿಸೂಚಿತ ಕಾಯಿಲೆ ಎಂದು ಘೋಷಿಸಲಾಗುತ್ತಿದ್ದು, ಆ ಸಾವನ್ನು ಆರೋಗ್ಯ ಇಲಾಖೆಯ ಗಮನಕ್ಕೆ ತಂದು ಕಡ್ಡಾಯವಾಗಿ ಮರಣೋತ್ತರ ಪರೀಕ್ಷೆಗೊಳಪಡಿಸುವ ನಿರ್ಧಾರ ತೆಗೆದುಕೊಳ್ಳಲು ಸರ್ಕಾರ ಸಹಮತ ವ್ಯಕ್ತಪಡಿಸಿದೆ. ಈ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳುತ್ತಿದೆ ಎಂದು ಹೇಳಿದರು.





