Mysore
36
scattered clouds

Social Media

ಶನಿವಾರ, 25 ಏಪ್ರಿಲ 2026
Light
Dark

ಹಕ್ಕಿಜ್ವರ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಮಾರ್ಗಸೂಚಿ

ಬೆಂಗಳೂರು: ಹಕ್ಕಿಜ್ವರ ನಿಯಂತ್ರಣದ ಸಲುವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಕೋಳಿ, ಮಾಂಸ ಮತ್ತು ಮೊಟ್ಟೆಗಳನ್ನು ಚೆನ್ನಾಗಿ ಬೇಯಿಸಿ ನಂತರ ಸೇವಿಸುವಂತೆ ಸಲಹೆ ನೀಡಲಾಗಿದೆ.

ಎಚ್5ಎನ್1 ಹಕ್ಕಿಜ್ವರ ಹೆಸರಘಟ್ಟದ ಮಠ್ಕೂರು ಗ್ರಾಮದ ರಾಜ್ಯ ಕೋಳಿ ಸಾಕಾಣಿಕೆ ತರಬೇತಿ ಕೇಂದ್ರದಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಗಳ ಸಹಯೋಗದಲ್ಲಿ ಏಪ್ರಿಲ್.14ರಿಂದ 10 ದಿನಗಳ ಕಾಲ ತೀವ್ರ ನಿಗಾವಹಿಸುವಿಕೆ ಮತ್ತು ನಿಯಂತ್ರಣ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.

ಭೋಪಾಲ್‌ನ ರಾಷ್ಟ್ರೀಯ ಉನ್ನತ ಭದ್ರತಾ ಪಶು ರೋಗಗಳ ಸಂಸ್ಥೆ ಪ್ರಯೋಗಾಲಯ ವರದಿಗಳ ಆಧಾರದ ಮೇಲೆ ರಾಜ್ಯ ಹಾಗೂ ಜಿಲ್ಲಾ ತ್ವರಿತ ಪ್ರತಿಕ್ರಿಯಾ ತಂಡಗಳು ಮತ್ತು ಹೆಸರಘಟ್ಟ ಹಾಗೂ ಸೊನ್ನೆನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ತಂಡಗಳನ್ನು ತಕ್ಷಣವೇ ನಿಯೋಜಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಸೋಂಕಿತ ವಲಯದ 0-3 ಕಿ.ಮೀ ವ್ಯಾಪ್ತಿಯಲ್ಲಿ ಸೋಂಕಿತ ವಲಯ ಮತ್ತು 3-10 ಕಿ.ಮೀ ವ್ಯಾಪ್ತಿಯಲ್ಲಿ ನಿಗಾವಹಿಕೆ ವಲಯವನ್ನು ಸ್ಥಾಪಿಸಲಾಗಿತ್ತು. ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ ಎಲ್ಲಾ ಪಕ್ಷಿಗಳನ್ನು ನಾಶಪಡಿಸಿ, ಮೊಟ್ಟೆಗಳು ಮತ್ತು ಸೋಂಕಿತ ಆಹಾರವನ್ನು ರಾಷ್ಟ್ರಿ?ಯ ಹಾಗೂ ಅಂತರರಾಷ್ಟ್ರೀಯ ಜೈವಿಕ ಭದ್ರತಾ ನಿಯಮಾನುಸಾರ ಸುರಕ್ಷಿತವಾಗಿ ವಿಲೇವಾರಿ ಮಾಡಿದೆ ಎಂದು ವಿವರಿಸಲಾಗಿದೆ.

ಸೋಂಕಿತ ಪ್ರದೇಶದ 10 ಕಿ.ಮೀ ವ್ಯಾಪ್ತಿಯೊಳಗಿನ 22 ಗ್ರಾಮಗಳಲ್ಲಿ ಒಟ್ಟು 28,172 ಜನಸಂಖ್ಯೆಯನ್ನು 10 ದಿನಗಳವರೆಗೆ ಸಮಗ್ರವಾಗಿ ಪರಿಶೀಲಿಸಲಾಗಿದೆ. ಅನೇಕ ಸುತ್ತಿನ ನಿಗಾವಹಿಸುವಿಕೆ ಕಾರ್ಯಗಳನ್ನು ಕೈಗೊಂಡು ನಿಯಮಾನುಸಾರ ಸ್ವಚ್ಛತಾ ಕ್ರಮಗಳನ್ನು ಪಾಲಿಸಲಾಗಿದೆ ಎಂದು ತಿಳಿಸಲಾಗಿದೆ.

 

Tags:
error: Content is protected !!