Mysore
29
broken clouds

Social Media

ಮಂಗಳವಾರ, 27 ಅಕ್ಟೋಬರ್ 2026
Light
Dark

ಕರ್ನಾಟಕದ ಎಸ್‌ಐಆರ್‌ ಅಂತಿಮ ಮತದಾರರ ಪಟ್ಟಿ ಪ್ರಕಟ

ಬೆಂಗಳೂರು: ಕರ್ನಾಟಕದಲ್ಲಿ ವಿಶೇಷ ತೀವ್ರ ಪರಿಷ್ಕರಣೆ, ಅಂದರೆ ಎಸ್‌ಐಆರ್‌ ಬಳಿಕ ಅಂತಿಮ ಮತದಾರರ ಪಟ್ಟಿ ಪ್ರಕಟವಾಗಿದೆ. ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್‌ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

ಪರಿಷ್ಕರಣೆಗೂ ಮೊದಲು ರಾಜ್ಯದಲ್ಲಿ 5 ಕೋಟಿ 54 ಲಕ್ಷದಷ್ಟು ಮತದಾರರಿದ್ದರು. ಇದೀಗ ಈ ಸಂಖ್ಯೆ 4 ಕೋಟಿ 55 ಲಕ್ಷದ 11ಕ್ಕೆ ಇಳಿದಿದೆ. ಹಿಂದಿನ ಪಟ್ಟಿಗೆ ಹೋಲಿಸಿದರೆ ಸುಮಾರು 99.32 ಲಕ್ಷ ಹೆಸರುಗಳು ಕಡಿಮೆಯಾಗಿವೆ.

ಅಂತಿಮ ಪಟ್ಟಿಯಲ್ಲಿ 2 ಕೋಟಿ 29 ಲಕ್ಷ 12 ಸಾವಿರದ 355 ಮಹಿಳಾ ಮತದಾರರು ಹಾಗೂ 2 ಕೋಟಿ 25 ಲಕ್ಷ 40 ಸಾವಿರದ 493 ಪುರುಷ ಮತದಾರರಿದ್ದಾರೆ. ರಾಜ್ಯದಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿದೆ.

ಇದಲ್ಲದೆ, 2,841 ತೃತೀಯ ಲಿಂಗಿ ಮತದಾರರು, 44,322 ಸೇವಾ ಮತದಾರರು ಹಾಗೂ 3,252 ಸಾಗರೋತ್ತರ ಮತದಾರರು ಪಟ್ಟಿಯಲ್ಲಿದ್ದಾರೆ. 18ರಿಂದ 19 ವರ್ಷದೊಳಗಿನ ಯುವ ಮತದಾರರ ಸಂಖ್ಯೆ 6,83,364. ಇನ್ನು 85 ವರ್ಷ ಮೇಲ್ಪಟ್ಟವರು 3,92,134 ಮಂದಿಯಿದ್ದು, ವಿಶೇಷ ಚೇತನ ಮತದಾರರ ಸಂಖ್ಯೆ 5,65,340 ಆಗಿದೆ.

ಪರಿಷ್ಕರಣೆ ವೇಳೆ ಸ್ಥಳಾಂತರಗೊಂಡವರು, ಪತ್ತೆಯಾಗದವರು, ಮೃತರು ಹಾಗೂ ಒಂದಕ್ಕಿಂತ ಹೆಚ್ಚು ಕಡೆ ದಾಖಲಾಗಿದ್ದ ಹೆಸರುಗಳನ್ನು ಪರಿಶೀಲಿಸಲಾಗಿದೆ. ಕರಡು ಪಟ್ಟಿಯಿಂದ ಹೊರಗುಳಿದವರ ಅರ್ಜಿಗಳನ್ನು ಪರಿಶೀಲಿಸಿ, ಅರ್ಹರ ಹೆಸರುಗಳನ್ನು ಅಂತಿಮ ಪಟ್ಟಿಗೆ ಸೇರಿಸಲಾಗಿದೆ.

ದಾಖಲೆಗಳ ಹೊಂದಾಣಿಕೆ ಪರಿಶೀಲನೆಗಾಗಿ 43,82,824 ನೋಟಿಸ್‌ಗಳನ್ನು ನೀಡಲಾಗಿದ್ದು, ವಿಚಾರಣೆ ಪೂರ್ಣಗೊಂಡಿದೆ. ಜೂನ್‌ 16ರಿಂದ ಅಕ್ಟೋಬರ್‌ 22ರವರೆಗೆ ಹೆಸರು ಸೇರ್ಪಡೆ, ತೆಗೆದುಹಾಕುವುದು ಮತ್ತು ವಿವರಗಳ ತಿದ್ದುಪಡಿಗೆ ಒಟ್ಟು 25,87,461 ಅರ್ಜಿಗಳು ಸಲ್ಲಿಕೆಯಾಗಿವೆ.

ಹೆಸರು ಸೇರ್ಪಡೆಗೆ ನಮೂನೆ–6ರಡಿ 10,42,863 ಅರ್ಜಿಗಳು, ಸಾಗರೋತ್ತರ ಮತದಾರರ ನೋಂದಣಿಗೆ ನಮೂನೆ–6ಎರಡಿ 4,840 ಅರ್ಜಿಗಳು ಬಂದಿವೆ. ಹೆಸರು ತೆಗೆದುಹಾಕಲು ನಮೂನೆ–7ರಡಿ 2,28,917 ಹಾಗೂ ವಿಳಾಸ ಬದಲಾವಣೆ ಸೇರಿದಂತೆ ತಿದ್ದುಪಡಿಗಳಿಗೆ ನಮೂನೆ–8ರಡಿ 13,10,841 ಅರ್ಜಿಗಳು ಸಲ್ಲಿಕೆಯಾಗಿವೆ.

ಅಂತಿಮ ಪಟ್ಟಿಯಲ್ಲಿ ಹೆಸರಿಲ್ಲದ ಅರ್ಹ ನಾಗರಿಕರಿಗೆ ಹೆಸರು ಸೇರ್ಪಡೆಗಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಮತದಾರರು ತಮ್ಮ ಹೆಸರು ಮತ್ತು ವಿವರಗಳನ್ನು ಪರಿಶೀಲಿಸಿಕೊಳ್ಳಿ.

Tags:
error: Content is protected !!