Mysore
29
clear sky

Social Media

ಮಂಗಳವಾರ, 21 ಜನವರಿ 2025
Light
Dark

ಸಚಿವ ನಾಗೇಂದ್ರ ರಾಜೀನಾಮೆ; ಹೆಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯೆ

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ ಕರ್ಮಕಾಂಡವು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರಿಗೆ ಗೊತ್ತಿದ್ದೇ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ‌.ಕುಮಾರಸ್ವಾಮಿ ಅವರು ದೂರಿದರು.

ಸಚಿವ ನಾಗೇಂದ್ರ ಅವರ ರಾಜೀನಾಮೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಈಗಾಗಲೇ ಪ್ರಕರಣದಲ್ಲಿ ಸುಮಾರು ₹80 ರಿಂದ‌ ₹85 ಕೋಟಿ‌ ರವಾನೆ ಆಗಿರುವ ಮಾಹಿತಿ ಇದೆ. ರಾಜೀನಾಮೆ ನಿರ್ಧಾರ ಮೊದಲೇ ಆಗಬೇಕಿತ್ತು. ಇಷ್ಟೆಲ್ಲಾ ಕೇವಲ ಒಬ್ಬ ಮಂತ್ರಿಯಿಂದ ಆಗಿರುವುದಲ್ಲ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಇಬ್ಬರೂ ಸೇರಿಯೇ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ರಾಜೀನಾಮೆ ಸಂಬಂಧ ಸಿಎಂ, ಡಿಸಿಎಂ ಹೇಳಿಕೆಗಳನ್ನು ನಾನು ಗಮನಿಸಿದೆ. ರಾಜೀನಾಮೆ ನೀಡುವುದಕ್ಕೆ ಸಚಿವರಿಗೆ ನಾನು ಹೇಳಿಲ್ಲ, ನಾನು ಹೇಳಿಲ್ಲ ಎನ್ನುತ್ತಿದ್ದರು. ಇದು ಬರೀ ಡ್ರಾಮಾ ಅಷ್ಟೇ. ಆ ಮಂತ್ರಿಗೆ ರಾಜೀನಾಮೆ ನೀಡಿ ಅನ್ನುವ ಧೈರ್ಯ ಇವರಿಗೆ ಇರಲಿಲ್ಲ. ಅದಕ್ಕೆ ಕಾರಣ ಹಗರಣದಲ್ಲಿ ದೊಡ್ಡ ಮಟ್ಟದ ಕೈಗಳಿವೆ. ಕಳೆದ ಮಾರ್ಚ್ ತಿಂಗಳಿನಲ್ಲಿಯೇ ಈ ಹಗರಣ ನಡೆದಿದೆ. ಅದನ್ನು ಇವರೆಲ್ಲರೂ ಸೇರಿ ಮುಚ್ಚಿಟ್ಟಿದ್ದಾರೆ, ಯಾಕೆ? ಆ ಅಧಿಕಾರಿ ಸಾವಿನಿಂದ, ಮಾಧ್ಯಮಗಳ ಮೂಲಕ ಇದು ಹೊರ ಬರದೇ ಇದ್ದಿದ್ದರೆ ಮುಚ್ಚಿ ಹಾಕುತ್ತಿದ್ದರು ಎಂದು ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.

ಹಗರಣದ ಒಳಹೊಕ್ಕು ತನಿಖೆ ನಡೆಸಬೇಕು. ಸರ್ಕಾರ ಮತ್ತು ಸಿಎಂ, ಡಿಸಿಎಂ ಗಮನಕ್ಕೆ ಬಂದೇ ಈ ಅಕ್ರಮ ನಡೆದಿದೆ. ಕೇವಲ ಒಂದು ಗಂಟೆಯಲ್ಲಿ ಹಣ ಬಿಡುಗಡೆಯಾಗಲು ಸಹಾಯ ಮಾಡಿದ್ದು ಯಾರು? ಅದೆಲ್ಲಾ ಹೊರಗೆ ಬರಬೇಕು. ತೆಲಂಗಾಣದ ಚುನಾವಣೆಗೆ ಹೋಗಿರುವ ಹಣ ಇದು. ಅಲ್ಲಿಗೆ ಹೋಗಿ ಚುನಾವಣೆ ಉಸ್ತುವಾರಿ, ಜವಾಬ್ದಾರಿ ನಿರ್ವಹಿಸಿದವರು ಯಾರು? ಯಾರ ಪಾತ್ರ ಏನಿದೆ? ಎಲ್ಲವೂ ಹೊರಗೆ ಬರಬೇಕು. ವಾಲ್ಮೀಕಿ‌ ನಿಗಮ ಹಣ ತೆಲಂಗಾಣಕ್ಕೆ ಹೋಗಿದೆ ಎನ್ನುವುದು ತನಿಖೆ ಬಳಿಕ ಗೊತ್ತಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೇಳಿದರು.

Tags: