Mysore
25
overcast clouds
Light
Dark

ಲೈಂಗಿಕ ದೌರ್ಜನ್ಯ ಪ್ರಕರಣ: ಸಂಸದ ಪ್ರಜ್ವಲ್‌ ವಿರುದ್ಧ ಅರೆಸ್ಟ್‌ ವಾರೆಂಟ್

ಬೆಂಗಳೂರು: ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬಂಧನದ ವಾರೆಂಟ್ ಜಾರಿಗೊಳಿಸಿದೆ. ಸದ್ಯ ಪ್ರಜ್ವಲ್‌ ವಿದೇಶದಲ್ಲಿದ್ದು, ಭಾರತಕ್ಕೆ ಮರಳಿದ ಕೂಡಲೇ ಬಂಧಿಸಲಾಗುವುದು. ಜತೆಗೆ ಪಾಸ್‌ಪೋರ್ಟ್ ರದ್ದತಿಗೂ ಕೂಡ ವಿಶೇಷ ತನಿಖಾ ದಳ ಪ್ರಯತ್ನ ನಡೆಸುತ್ತಿದೆ.

ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇರೆಗೆ ಹೊಳೆನರಸೀಪುರ ಠಾಣೆಯಲ್ಲಿ ಪ್ರಜ್ವಲ್‌ ಹಾಗೂ ಅವರ ತಂದೆ ರೇವಣ್ಣ ವಿರುದ್ಞ ದೂರು ದಾಖಲಾಗಿತ್ತು. ಈ ಕೃತ್ಯದ ಸಂತ್ರಸ್ತೆ ಹೇಳಿಕೆ ಆಧರಿಸಿ ಪ್ರಜ್ವಲ್ ರೇವಣ್ಣ ಅವರ ಮೇಲೆ 376 ರಡಿ (ಅತ್ಯಾಚಾರ) ಸೆಕ್ಷನ್ ಅನ್ನು ಸಹ ಎಸ್‌ಐಟಿ ಸೇರಿಸಿತ್ತು. ಇದಾದ ಬಳಿಕ ವಿಚಾರಣೆಗೆ ಹಾಜರಾಗುವಂತೆ ಎಸ್​ಐಟಿ ನೋಟಿಸ್​ ನೀಡಿದ್ದರೂ, ಪ್ರಜ್ವಲ್​ ರೇವಣ್ಣ ಇನ್ನೂವರೆಗು ವಿಚಾರಣೆಗೆ ಹಾಜರಾಗಿಲ್ಲ.

ಪ್ರಜ್ವಲ್ ರೇವಣ್ಣ ವಿರುದ್ಧ ಹೊರಡಿಸಿದ್ದ ನೋಟಿಸ್‌ಗಳ ಬಗ್ಗೆ ಕೋರ್ಟ್‌ ಮಾಹಿತಿ ಕೇಳಿತ್ತು. ಈ ವೇಳೆ ಲುಕ್‌ ಔಟ್ ನೋಟಿಸ್, ಬ್ಲೂ ಕಾರ್ನರ್ ನೋಟಿಸ್ ನೀಡಿರುವ ಬಗ್ಗೆ ಮಾಹಿತಿ ನೀಡಿದ್ದ ಎಸ್‌ಐಟಿ, ಬಂಧನಕ್ಕೆ ಚಾರ್ಜ್ ಶೀಟ್ ಅವಶ್ಯಕತೆ ಇಲ್ಲ ಎಂದು ಕೋರ್ಟ್‌ಗೆ ಮನವರಿಕೆ ಮಾಡಿತ್ತು. ಹೀಗಾಗಿ ಕೋರ್ಟ್‌ ಬಂಧನದ ವಾರಂಟ್‌ ಜಾರಿ ಮಾಡಿದೆ.

ಪ್ರಜ್ವಲ್ ತಲೆಮರೆಸಿಕೊಂಡು 22 ದಿನ:
ಇನ್ನು ಸಂಸದ ಪ್ರಜ್ವಲ್ ರೇವಣ್ಣ ನಾಪತ್ತೆಯಾಗಿ ಈವರೆಗೆ 22 ದಿನಗಳು ಕಳೆದಿವೆ. ಎಸ್‌ಐಟಿ ವತಿಯಿಂದ ಲೈಂಗಿಕ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಕೇಸ್‌ ಕುರಿತು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿದರೂ ಈವರೆಗೆ ಹಾಜರಾಗಿಲ್ಲ. ನಾನು ವಿದೇಶದಲ್ಲಿದ್ದೇನೆ, ವಿಚಾರಣೆಗೆ ಹಾಜರಾಗಲು ಒಂದು ವಾರಗಳ ಕಾಲಾವಕಾಶ ಕೊಡಿ ಎಂದು ಸಂಸದ ಪ್ರಜ್ವಲ್ ರೇವಣ್ಣ ಮನವಿ ಮಾಡಿದ್ದರು. ಇದಾದ ನಂತರ, ನಾಲ್ಕೈದು ಬಾರಿ ಭಾರತಕ್ಕೆ ಮರಳಲು ಟಿಕೆಟ್ ಬುಕ್ ಮಾಡಿದ್ದರೂ, ಪುನಃ ಅದನ್ನು ರದ್ದುಗೊಳಿಸಿದ್ದಾರೆ. ಜೊತೆಗೆ, ಪ್ರಜ್ವಲ್ ರೇವಣ್ಣನನ್ನು ವಶಕ್ಕೆ ಪಡೆಯಲು ಎಸ್‌ಐಟಿ ಬ್ಲೂ ಕಾರ್ನರ್ ನೋಟೀಸ್ ಹೊರಡಿಸಿತ್ತು.

ಪ್ರಜ್ವಲ್‌ ಖಾತೆಗೆ ದೊಡ್ಡ ಮೊತ್ತದ ಹಣ ವರ್ಗ:
ವಿದೇಶದಲ್ಲಿ ತಲೆಮರೆಸಿಕೊಂಡಿರುವ ಸಂಸದ ಪ್ರಜ್ವಲ್‌ ರೇವಣ್ಣ ಅವರ ಖಾತೆಗೆ ಬೆಂಗಳೂರಿಗೆ ಉದ್ಯಮಿಯೊಬ್ಬರು ದೊಡ್ಡ ಮೊತ್ತದ ಹಣ ವರ್ಗಾವಣೆ ಮಾಡಿತರುವುದಾಗಿ ಎಸ್‌ಐಟಿ ಮಾಹಿತಿ ಕಲೆ ಹಾಕಿದೆ. ಹೀಗಾಗಿ ಪ್ರಜ್ವಲ್‌ ಖಾತೆಯನ್ನು ಮುಟ್ಟುಗೊಲು ಹಾಕಲು ಎಸ್‌ಐಟಿ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಪ್ರಜ್ವಲ್‌ ಜೊತೆ ಬೆಂಗಳೂರು ಮೂಲದ ಓರ್ವ ಹಾಗೂ ದುಬೈ ಮೂಲದ ಓರ್ವ ಸ್ನೇಹಿತ ಇದ್ದಾರೆ ಎಂದು ತಿಳಿದು ಬಂದಿದೆ.