ಬೆಂಗಳೂರು: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಗುರುವಾರ ತಡರಾತ್ರಿ ನಿಧನರಾಗಿದ್ದು, ಈ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಬೆಂಗಳೂರಿನ ಜೆ.ಪಿ ಭವನದ ಜೆಡಿಎಸ್ ಕಚೇರಿಯಲ್ಲಿ ಇಂದು(ಡಿಸೆಂಬರ್.27) ಮನಮೋಹನ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಮನಮೋಹನ್ ಸಿಂಗ್‌ರ ನಿಧನ ಈ ದೇಶಕ್ಕೆ ತುಂಬಲಾರದ ನಷ್ಟ. ನಾನು ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದು 1991ರಲ್ಲಿ ಆಗ ಅವರು ವಿಶ್ವಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಭಾರತ ದೇಶಕ್ಕೆ ಅವರು 2 ಬಾರಿ ಪ್ರಧಾನಿಯಾಗಿ ಸುರ್ದೀಘ ಸೇವೆ ಸಲ್ಲಿಸಿದ್ದಾರೆ. ಅವರ ಅಗಲಿಕೆಯಿಂದ ನನಗೆ ವೈಯಕ್ತಿಕವಾಗಿ ಬೇಸರ ತಂದಿದೆ. ಅವರ ಆತ್ಮಕ್ಕೆ ಭಗವಂತ ಮೋಕ್ಷ ಕೊಡಲಿ. ಅವರ ಕುಟುಂಬಕ್ಕೆ ನೋವು ಸಹಿಸುವ ಶಕ್ತಿ ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.
ನಾನು ಕರ್ನಾಟಕದಿಂದ ಮೊದಲ ಬಾರಿ ಲೋಕಸಭೆಗೆ ಪ್ರವೇಶಿಸಿದಾಗ ಸಿಂಗ್ ಅವರು ನರಸಿಂಹ ರಾವ್ ಸರ್ಕಾರದಲ್ಲಿ ಹಣಕಾಸು ಮಂತ್ರಿಯಾಗಿದ್ದರು. ಅಲ್ಲದೇ ಅವರು ಅನೇಕ ಹುದ್ದೆಗಳನ್ನು ಅಲಂಕರಿಸಿದ್ದರು. ಇನ್ನೂ ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಕೆಲಸ ಮಾಡಿದ್ದಾರೆ. ಆರ್ಥಿಕ ತಜ್ಞರಾಗಿ ವಿಶ್ವ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿ ಆರ್ಥಿಕ ಬುದ್ಧಿವಂತರಾಗಿದ್ದರು ಎಂದು ಹೇಳಿದ್ದಾರೆ.