ಬೆಂಗಳೂರು: ದೇವರು ಶಕ್ತಿ ಕೊಡುವವರೆಗೂ, ಮುಂದೆ ಜನ ನಮಗೆ ಅಧಿಕಾರ ಕೊಡುವವರೆಗೂ ಗ್ಯಾರಂಟಿ ಯೋಜನೆಗಳು ನಿಲ್ಲದೆ ನಿರಂತರವಾಗಿ ಮುಂದುವರೆಯುತ್ತವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು, ಎಷ್ಟೇ ಟೀಕೆ ಮಾಡಲಿ, ಜನ ಖುಷಿಯಾಗಿದ್ದಾರೆ. ಮಹಿಳಾ ಪ್ರಯಾಣಿಕರು ತಮಗೆ ಶೇಂಗಾ ಹೋಳಿಗೆ ಮತ್ತು ರೊಟ್ಟಿ ನೀಡಿ ತಮ ಸಂತಸ ಹಂಚಿಕೊಂಡಿದ್ದಾರೆ. ಟೀಕೆಗಳು ಸಾಯುತ್ತವೆ, ಕಾರ್ಯಕ್ರಮಗಳು ಉಳಿಯುತ್ತವೆ ಎಂದರು.
ಇಡೀ ದೇಶಕ್ಕೆ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಮಾದರಿಯಾಗಿವೆ. ಮಹಿಳೆಯರಿಗೆ ಉಚಿತ ಪ್ರಯಾಣದಿಂದ ಹಣ ಉಳಿತಾಯವಾಗುತ್ತಿದೆ. ದೇವಸ್ಥಾನಗಳಿಗೆ, ಸಂಬಂಧಿಕರ ಮನೆಗೆ, ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಹಣ ಉಳಿತಾಯವಾಗುತ್ತಿರುವುದಂತೂ ನಿಜ. ಇದರಿಂದಾಗಿ ಅವರು ಸಂತಸದಿಂದಿದ್ದಾರೆ. ವರ್ಗ, ಜಾತಿರಹಿತವಾಗಿ ಈ ಯೋಜನೆಯನ್ನು ಸಚಿವ ರಾಮಲಿಂಗಾರೆಡ್ಡಿಯವರ ನೇತೃತ್ವದಲ್ಲಿ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಕೊಟ್ಟ ಮಾತನ್ನು ಉಳಿಸಿಕೊಂಡ ಸಮಾಧಾನ ನಮಗಿದೆ. ಜನ ನಮಗೆ ಎಲ್ಲಿಯವರೆಗೂ ಅಧಿಕಾರ ಕೊಡುತ್ತಾರೋ, ಅಲ್ಲಿಯವರೆಗೂ ಗ್ಯಾರಂಟಿ ಯೋಜನೆಗಳು ಮುಂದುವರೆಯುತ್ತವೆ ಎಂದರು.
ರಾಜ್ಯ ಸರ್ಕಾರ ಈ ಹಿಂದೆ ವೃದ್ಧಾಪ್ಯ ವೇತನ, ವಿಧವಾ ವೇತನ, ಬ್ಯಾಂಕ್ ರಾಷ್ಟ್ರೀಕರಣ, ಸ್ತ್ರೀಶಕ್ತಿ ಸಂಘಟನೆಗಳ ರಚನೆ, ಯಾವುದೇ ಕಾರ್ಯಕ್ರಮಗಳಾಗಿದ್ದರೂ ಜನರ ಹೃದಯ ಮತ್ತು ಬದುಕಿಗೆ ಹತ್ತಿರವಾಗಿವೆ. ಅವುಗಳನ್ನು ಬಿಜೆಪಿ ಸೇರಿದಂತೆ ಯಾವುದೇ ಸರ್ಕಾರಗಳು ಅಧಿಕಾರಕ್ಕೆ ಬಂದರೂ ಬದಲಾಯಿಸಲಾಗಿಲ್ಲ ಎಂದು ಹೇಳಿದರು.



