ಬೆಂಗಳೂರು : ಕೇಂದ್ರ ಸರ್ಕಾರದ ಬಹುನಿರೀಕ್ಷಿತ ಸರಕು ಸೇವಾ ತೆರಿಗೆ (ಜಿಎಸ್‌ಟಿ) ಪರಿಷ್ಕರಣೆಯಿಂದ ದೇಶಿಯ ಉದ್ಯಮ ವಲಯದಲ್ಲಿ ಭಾರಿ ಬದಲಾವಣೆಯಾಗಲಿದ್ದು. ದೇಶದ ಆರ್ಥಿಕ ಬೆಳವಣಿಗೆಗೆ ಹೊಸ ಭಾಷ್ಯ ಬರೆಯಲಿದೆ ಎಂದು ನಿರೀಕ್ಷಿಸಲಾಗಿದೆ.
ಸೆಪ್ಟೆಂಬರ್ ೨೨ ರಿಂದ ದೇಶಾದ್ಯಂತ ಜಿಎಸ್‌ಟಿ ಪರಿಷ್ಕರಣೆಯಾಗಿದ್ದು ತೆರಿಗೆ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಯನ್ನು ತಂದಿರುವುದು ಹೊಸ ಆರ್ಥಿಕ ಚೇತರಿಕೆಗೆ ಮುನ್ನುಡಿ ಬರೆಯಲಿದೆ ಎಂದು ವಿಶ್ಲೇಷಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೂಸಾದ ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್, ಸಬ್‌ಕಾ ವಿಶ್ವಾಸ್ ಮತ್ತು ಸಬ್‌ಕಾ ಪ್ರಯಾಸ್‘ ಎಂಬ ಬದ್ಧತೆಯನ್ನು ಪೂರೈಸುವ ಪ್ರಮುಖ ಹೆಜ್ಜೆಯಾಗಿದೆ ಎಂಬ ವಿಶ್ಲೇಷಣೆಗಳು ಆರಂಭವಾಗಿವೆ.
ಹೊಸ ಜಿಎಸ್‌ಟಿ ಸುಧಾರಣೆಯು ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸುವುದಲ್ಲದೆ, ಸಾಂಪ್ರದಾಯಿಕ ಕೈಗಾರಿಕೆಗಳು, ಕರಕುಶಲ ವಸ್ತುಗಳು, ಕೃಷಿ ಮತ್ತು ಸಂಸ್ಕರಿಸಿದ ಆಹಾರ ವಲಯಗಳಿಗೆ ನೇರವಾಗಿ ಪ್ರಯೋಜನವನ್ನು ನೀಡುವ ವಿಶಾಲ ಆರ್ಥಿಕ ಕ್ರಮವಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಹಿಂದಿನ ಸಂಕೀರ್ಣ ಸ್ಲ್ಯಾಬ್ ರಚನೆಯು ಸಣ್ಣ ವ್ಯಾಪಾರಿಗಳು ಮತ್ತು ಕೈಗಾರಿಕೋದ್ಯಮಿಗಳಿಗೆ ಹೊರೆಯಾಗಿ ಪರಿಣಮಿಸಿತ್ತು. ಕೇಂದ್ರ ಸರ್ಕಾರವು ಅದನ್ನು ವ್ಯಾಪಾರ ಸ್ನೇಹಿ ರೀತಿಯಲ್ಲಿ ಸರಳೀಕರಿಸಿದೆ. ಇದು ಸಾಮಾನ್ಯ ಜನರ ಜೀವನದಲ್ಲಿ ವ್ಯಾಪಾರ ವಹಿವಾಟಗೆ ಅನುಕೂಲತೆಯನ್ನು ತರಲಿದೆ.
ಕರ್ನಾಟಕದ ಸಣ್ಣ ಪ್ರಮಾಣದ ಕೈಗಾರಿಕೆಗಳು ಜಿಎಸ್‌ಟಿ ಕಡಿತದಿಂದ ಪ್ರಯೋಜನ ಪಡೆಯಲಿವೆ. ಮೈಸೂರು ರೇಷ್ಮೆ, ಇಳಕಲ್, ಮೊಳಕಾಲ್ಮೂರು ರೇಷ್ಮೆಗಳು ಶೇ.೫ ಸ್ಲ್ಯಾಬ್‌ನಲ್ಲಿರುತ್ತವೆ. ವಿಶ್ವಪ್ರಸಿದ್ಧ ಚನ್ನಪಟ್ಟಣ ಮತ್ತು ಕಿನ್ನಾಳ ಗೊಂಬೆ ಆಟಿಕೆಗಳು ಶೇ.೧೨ ರಿಂದ ಶೇ.೫ ಸ್ಲ್ಯಾಬ್‌ಗೆ ಇಳಿಕೆಯಾಗಿವೆ.
ಮೈಸೂರು ಪಾಕ್ ಮತ್ತು ಧಾರವಾಡ ಪೇಡಾದಂತಹ ಸಿಹಿತಿಂಡಿಗಳು ಮೊದಲಿಗಿಂತ ಸಿಹಿಯಾಗಿರುತ್ತವೆ. ಇದಲ್ಲದೆ, ಪ್ಲಾಂಟರ್‌ಗಳು ಮತ್ತು ರೈತರ ಮುಖಗಳಲ್ಲಿ ಮಂದಹಾಸ ಮೂಡಿಸಿವೆ. ಏಕೆಂದರೆ, ಏಲಕ್ಕಿ, ಕರಿಮೆಣಸು, ಕಾಫಿ, ಕಿತ್ತಳೆ, ದಾಳಿಂಬೆ, ನಂಜನಗೂಡು ರಸಬಾಳೆ, ಕಮಲಪುರುಷ ಕೆಂಪು ಬಾಳೆಹಣ್ಣು, ಇಂಡಿ ನಿಂಬೆ ಈಗ ಮೊದಲಿಗಿಂತಲೂ ಅಗ್ಗದ ದರದಲ್ಲಿ ಸಿಗಲಿವೆ.





