Mysore
19
clear sky

Social Media

ಬುಧವಾರ, 17 ಡಿಸೆಂಬರ್ 2025
Light
Dark

ಗೃಹಲಕ್ಷ್ಮಿ ಗದ್ದಲ : ಸರ್ಕಾರದ ವಿರುದ್ಧ ವಿಪಕ್ಷ ಆಕ್ರೋಶ

Assembly Session

ಬೆಂಗಳೂರು : ಗೃಹಲಕ್ಷ್ಮಿ ಯೋಜನೆ ಕುರಿತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸದನಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ. ಆದ್ದರಿಂದ ಸಚಿವರು 1.20 ಕೋಟಿ ಫಲಾನುಭವಿ ಮಹಿಳೆಯರ ಬಳಿ ಕ್ಷಮೆ ಯಾಚಿಸಬೇಕೆಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.

ವಿಧಾನಸಭೆಯಲ್ಲಿ ಮಾತನಾಡಿದ ಅವರು, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗೃಹಲಕ್ಷ್ಮಿ ಯೋಜನೆ ಕುರಿತು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಇದನ್ನು ಮುಖ್ಯಮಂತ್ರಿ ಕೂಡ ಒಪ್ಪಿಕೊಂಡಿದ್ದಾರೆ. ಈ ಯೋಜನೆ 1.20 ಕೋಟಿ ಜನರಿಗೆ ಸಂಬಂಧಿಸಿದೆ. ಜನವರಿ, ಫೆಬ್ರವರಿ ತಿಂಗಳ ಸಹಾಯಧನ ನೀಡದೆ ಮೇ, ಜೂನ್, ಜುಲೈ ತಿಂಗಳ ಸಹಾಯಧನ ನೀಡಲು ಹೇಗೆ ಸಾಧ್ಯ? ಈ ತಿಂಗಳ ಸಹಾಯಧನ ನೀಡದೆ ಮುಂದಕ್ಕೆ ಹೋಗಲಾಗಿದೆ ಎಂದರೆ ಜನರಿಗೆ ಮೋಸ ಮಾಡಿದ್ದಾರೆ ಅಥವಾ ಖಜಾನೆ ಖಾಲಿಯಾಗಿದೆ ಎಂದೇ ಅರ್ಥ ಎಂದರು.

ಇದನ್ನು ಓದಿ: ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ತಪಾಸಣೆ: ಕೈದಿಗಳ ಬಳಿ ಮಾರಕಾಸ್ತ್ರಗಳು ಪತ್ತೆ

ಈ ಎರಡು ತಿಂಗಳ ಸಹಾಯಧನವನ್ನು ಏಕೆ ಸ್ಥಗಿತ ಮಾಡಲಾಗಿದೆ ಎಂದು ಸರ್ಕಾರ ಸದನಕ್ಕೆ ಮಾಹಿತಿ ನೀಡಬೇಕು. ಈ ಹಣವನ್ನು ಕಾಂಗ್ರೆಸ್ ಪಕ್ಷ ಬಳಸಿಕೊಂಡಿದೆಯೇ ಅಥವಾ ಸ್ವಂತಕ್ಕೆ ಸಚಿವರು ಬಳಸಿಕೊಂಡರಾ ಎಂಬ ಬಗ್ಗೆ ತಿಳಿಯಬೇಕಿದೆ. ಕೋಟ್ಯಂತರ ಮಹಿಳೆಯರು ಇದೇ ಹಣ ನಂಬಿರುತ್ತಾರೆ‌. ಮನೆಗೆ ದಿನಸಿ, ಸಾಲ ಮರುಪಾವತಿಗೆ ಈ ಹಣ ಅವಲಂಬಿಸಿರುತ್ತಾರೆ. ಪ್ರತಿ ತಿಂಗಳು 2,480 ಕೋಟಿ ರೂ. ನೀಡಬೇಕು. ಅಂದರೆ ಎರಡು ತಿಂಗಳು 5,000 ಕೋಟಿ ರೂ. ನೀಡಬೇಕು. ಇಷ್ಟೊಂದು ಹಣ ಎಲ್ಲಿಗೆ ಹೋಗಿದೆ? ಎರಡು ತಿಂಗಳು ಬಿಟ್ಟು ನೇರವಾಗಿ ಮುಂದಕ್ಕೆ ಹೋಗಲು ಯಾವ ಕಾನೂನಿನಲ್ಲಿ ಅವಕಾಶವಿದೆ ಎಂದು ಪ್ರಶ್ನೆ ಮಾಡಿದರು.

ಈ ನಡುವೆ ಸಚಿವರು ಸದನಕ್ಕೆ ಬರುತ್ತಿಲ್ಲ. ಸದನಕ್ಕೆ ತಪ್ಪು ಮಾಹಿತಿ ನೀಡಿ ಅಗೌರವ ತೋರಲಾಗಿದೆ. ಶಾಸಕರು ಪ್ರಶ್ನೆ ಕೇಳಿದಾಗ ಸರಿಯಾದ ಉತ್ತರ ನಂತರ ನೀಡುತ್ತೇನೆ ಎಂದಿದ್ದರೆ ಸಾಕಿತ್ತು. ಆದರೆ ತಪ್ಪಾದ ಉತ್ತರ ನೀಡಬಾರದಿತ್ತು. ಈಗ ತಪ್ಪು ಮಾಹಿತಿ ನೀಡಿದ್ದಕ್ಕೆ ಸಚಿವರು ಮಹಿಳೆಯರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು‌.

ನಂತರ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮಾತಿಗೆ ಪ್ರತಿಕ್ರಿಯಿಸಿದ ಅವರು, ಯಾರಿಗಾದರೂ ಮನಸ್ಸಿಗೆ ನೋವಾಗಿದ್ದರೆ ಎಂಬ ಮಾತು ಬೇಕಿರಲಿಲ್ಲ. ಈ ಸುಳ್ಳಿನಿಂದ ಎಲ್ಲರ ಮನಸ್ಸಿಗೂ ನೋವಾಗಿದೆ. ಆದ್ದರಿಂದ ನೇರವಾಗಿ ಕ್ಷಮೆ ಕೇಳಬೇಕು. ಈ ರೀತಿ ತಪ್ಪಾದ ಮಾಹಿತಿ ನೀಡಿದ್ದು ಯಾವ ಅಧಿಕಾರಿ ಎಂಬುದನ್ನು ತಿಳಿಸಬೇಕು. ಎರಡು ತಿಂಗಳ ಸಹಾಯಧನ ಯಾವಾಗ ನೀಡಲಾಗುವುದು ಎಂದು ಹೇಳಬೇಕು ಎಂದು ಒತ್ತಾಯಿಸಿದರು.

ಆದರೆ ಈ ಬಗ್ಗೆ ಸಚಿವರು ಸ್ಪಷ್ಟೀಕರಣ ನೀಡದಿದ್ದಾಗ ಪ್ರತಿಪಕ್ಷದ ಎಲ್ಲ ಶಾಸಕರು ಸಭಾತ್ಯಾಗ ಮಾಡಿದರು.

Tags:
error: Content is protected !!