ಬೆಳಗಾವಿ: ವಿಧಾನಸಭೆಯಲ್ಲಿ ಇಂದು ಗ್ರೇಟರ್ ಬೆಂಗಳೂರು ಆಡಳಿತ 2ನೇ ತಿದ್ದುಪಡಿ ವಿಧೇಯಕ ಮಂಡನೆ ಆಗಿದೆ.
ಡಿಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ.ಶಿವಕುಮಾರ್ ಅವರು ವಿಧಾನಸಭೆಯಲ್ಲಿ 2024ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಮಂಡಿಸಿದರು.
ಬಳಿಕ ಮಾತನಾಡಿದ ಅವರು, ರಾಜ್ಯಸಭೆ ಸದಸ್ತೆ ಸುಧಾಮೂರ್ತಿ, ಚಿಕ್ಕಬಳ್ಳಾಪುರ ಸಂಸದ ಸುಧಾಕರ್ ಅವರ ಕ್ಷೇತ್ರದ ಕೆಲವು ಭಾಗ ಪಾಲಿಕೆ ವ್ಯಾಪ್ತಿಗೆ ಬರುತ್ತಿವೆ. ಜೊತೆಗೆ ಜಿಬಿಎ ಸದಸ್ಯರ ಪಟ್ಟಿಯಲ್ಲಿ ಪಾಲಿಕೆ ವ್ಯಾಪ್ತಿಯ ನಿವಾಸಿಯಾಗಿರುವ ಜನಪ್ರತಿನಿಧಿಗಳ ಹೆಸರು ಬಿಟ್ಟು ಹೋಗಿದ್ದು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು, ಪರಿಷತ್ ಸದಸ್ಯರನ್ನು ಜಿಬಿಎ ಸದಸ್ಯರನ್ನಾಗಿ ಸೇರಿಸಲು ಈ ತಿದ್ದುಪಡಿ ತರಲಾಗಿದೆ. ಸಿಎಂ ಅವರೇ ಜಿಬಿಎ ಮುಖ್ಯಸ್ಥರಾಗಿರುವ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿಗಳು ಹಾಗೂ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರ ಹೆಸರು ಸೇರಿಸಲಾಗಿದೆ. ಇನ್ನು ಹಣಕಾಸು ಇಲಾಖೆ ಕಾರ್ಯದರ್ಶಿಗಳನ್ನು ಈ ಸದಸ್ಯರ ಸಮಿತಿಯಲ್ಲಿ ಸೇರಿಸಲು ನಿರ್ಧರಿಸಲಾಗಿದೆ. ಇತ್ತೀಚೆಗೆ ನಡೆದ ಜಿಬಿಎ ಮೊದಲ ಸಭೆಯಲ್ಲಿ ನಾವು ಈ ವಿಚಾರವನ್ನು ಗಮನಿಸಿದೆವು. ವಿರೋಧ ಪಕ್ಷದ ಸದಸ್ಯರು ತಮ್ಮ ರಾಜಕೀಯ ನಿಲುವಿನಿಂದಾಗಿ ಈ ಸಭೆಯಲ್ಲಿ ಭಾಗವಹಿಸಿರಲಿಲ್ಲ. ಹೀಗಾಗಿ ನಾವು ಈ ತಿದ್ದುಪಡಿ ತಂದು ಇವರುಗಳನ್ನು ಜಿಬಿಎ ಸದಸ್ಯರನ್ನಾಗಿ ಸೇರಿಸಲಾಗುತ್ತಿದೆ ಎಂದು ತಿಳಿಸಿದರು.





