ಬೆಂಗಳೂರು: ನಮ್ಮ ಪಕ್ಷದಿಂದ ಕೆಲವು ಅಭಿವೃದ್ಧಿ ಕಾರ್ಯಗಳಿಗೆ ಮಾತ್ರ ಅನುದಾನ ಕಡಿಮೆಯಾಗಿದೆಯೇ ಹೊರತು ಅನುದಾನವೇ ಸಿಕ್ಕಿಲ್ಲ ಎನ್ನುವುದು ತಪ್ಪು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಕ್ರಮಗಳು ಸಂಪೂರ್ಣ ನಿಂತುಹೋಗಿವೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಿಂದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಕಡಿಮೆ ಸಿಕ್ಕಿದೆ ಎಂದರೆ ಅದನ್ನು ನಾನು ಅಂಗೀಕರಿಸುತ್ತೇನೆ. ಆದರೆ ಅನುದಾನವೇ ಸಿಕ್ಕಿಲ್ಲ ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದರು.
ಇನ್ನು ಕೆಲವು ಕ್ಷೇತ್ರಗಳಲ್ಲಿ ಹಿಂದಿನ ಅವಧಿಗಳಿಗೆ ಹೋಲಿಕೆ ಮಾಡಿ ನೋಡಿದರೆ ಕಡಿಮೆ ಪ್ರಮಾಣದಲ್ಲಿ ಅನುದಾನ ದೊರೆತಿದೆ ಎಂಬಂತೆ ಭಾಸವಾಗುತ್ತಿದ್ದು, ಅನುದಾನವೇ ಸಿಕ್ಕಿಲ್ಲವೆಂದು ಹೇಳುವುದು ತಪ್ಪು. ನಮ್ಮ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣ ವಿನಿಯೋಗಿಸಿರುವುದರಿಂದ ಅನುದಾನ ಕಡಿಮೆಯಾಗಿದೆ. ಆದರೆ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನವೂ ಅಭಿವೃದ್ಧಿ ಕೆಲಸ ಎಂದು ಬಿಜೆಪಿ ನಾಯಕರ ಹೇಳಿಕೆಗೆ ಟಕ್ಕರ್ ಕೊಟ್ಟರು.