ಬೆಂಗಳೂರು: ರಾಜ್ಯಪಾಲ ಹಾಗೂ ರಾಜ್ಯ ಸರ್ಕಾರದ ನಡುವೆ ಶೀತಲ ಸಮರ ಮುಂದುವರೆದಿದ್ದು, ರಾಜ್ಯಪಾಲರಿಂದ ಅನುಮೋದನೆ ದೊರೆಯಬೇಕಿದ್ದ ರಾಜ್ಯ ಸರ್ಕಾರದ ವಿವಿಧ ವಿಧೇಯಕಗಳಿಗೆ ಅನುಮತಿ ನೀಡದೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ವಿಧೇಯಕವನ್ನು ಹಿಂತಿರುಗಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚಳಿಗಾಲದ ಅಧಿವೇಶನವೂ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯಿತು. ಆ ವೇಳೆ ರಾಜ್ಯ ಸರ್ಕಾರದಿಂದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಮುಜರಾಯಿ, ಕರ್ನಾಟಕ ಮಿನರಲ್ಸ್ ಹಕ್ಕು ಮತ್ತು ಬೇರಿಂಗ್ ಲ್ಯಾಂಡ್ ಟ್ಯಾಕ್ಸ್ ಬಿಲ್-2024, ಕರ್ನಾಟಕ ಸಹಕಾರಿ ಸೊಸೈಟಿಗಳ ತಿದ್ದುಪಡಿ-2024, ಗದಗ-ಬೆಟಗೇರಿ ವ್ಯಾಪಾರ ಹಾಗೂ ಸಂಸ್ಕೃತಿ ಮತ್ತು ವಸ್ತು ಪ್ರದರ್ಶನ ಪ್ರಾಧಿಕಾರ ವಿಧೇಯಕ-2024 ಅಂಗೀಕಾರವಾಗಿತ್ತು. ಈ ವಿಧೇಯಕಗಳ ಅನುಮೋದನೆಗಾಗಿ ರಾಜ್ಯಪಾಲರ ಕಚೇರಿಗೆ ಕಳುಹಿಸಲಾಗಿತ್ತು. ಆದರೆ ರಾಜ್ಯಪಾಲರು ಅನುಮೋದನೆಗೆ ಅನುಮತಿ ನೀಡದೆ ವಿಧೇಯಕಗಳ ಬಗ್ಗೆ ಸ್ಪಷ್ಟನೆ ನೀಡುವಂತೆ ಕೋರಿ ಆ ವಿಧೇಯಕಗಳನ್ನು ರಾಜ್ಯ ಸರ್ಕಾರಕ್ಕೆ ಹಿಂತಿರುಗಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನೂ ರಾಜ್ಯಪಾಲರ ಈ ನಡೆಗೆ ಅಸಮಾಧಾನ ವ್ಯಕ್ತಪಡಿಸಿರುವ ರಾಜ್ಯ ಸರ್ಕಾರ ಕಾನೂನು ಹೋರಾಟ ನಡೆಸಲು ಚಿಂತನೆ ನಡೆಸುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.