ಬೆಂಗಳೂರು: ವಿಧಾನಸಭೆಯಲ್ಲಿ ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಸದನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ.
ವಿಧಾನಮಂಡಲದಲ್ಲಿ ಇಂದು(ಮಾರ್ಚ್.3) ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವಿನ ವಾಕ್ಸಮರಕ್ಕೆ ವೇದಿಕೆ ಸಜ್ಜಾಗಿದೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಇಂದು ಬೆಳಿಗ್ಗೆ 11 ಗಂಟೆಗೆ ಉಭಯ ಸದನಗಳ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಬಳಿಕ ರಾಜ್ಯಪಾಲರಿಗೆ ಬೀಳ್ಕೊಟ್ಟು ಕಲಾಪ ಪ್ರಾಂರಭವಾಗಲಿದ್ದು, ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಿದ್ದಾರೆ.
ಮಾರ್ಚ್.4 ರಿಂದ 6 ರವರೆಗೂ ಸದನದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ನಡೆಯಲಿದ್ದು, ಈ ವೇಳೆ ಆಡಳಿತ ಪಕ್ಷ ವಿಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪ ನಡೆಯಲಿದೆ. ಅಲ್ಲದೇ ಆಡಳಿತರೂಢ ಪಕ್ಷ ಕಟ್ಟಿಹಾಕುಲು ವಿಪಕ್ಷಗಳು ತಯಾರಿ ನಡೆಸಿದ್ದು, ರಾಜ್ಯಪಾಲರ ಸರ್ಕಾರದ ನಡುವಿನ ಜಟಾಪಟಿ, ಕಾನೂನು ಸುವ್ಯವಸ್ಥೆ, ಮೈಕ್ರೋ ಫೈನಾನ್ಸ್ ಕಿರುಕುಳ, ಬಾಣಂತಿ ಸಾವು, ಶಾಸಕರಿಗೆ ಅನುದಾನ ಕೊರತೆ, ಬಸ್, ಮೆಟ್ರೋ ಪ್ರಯಾಣ ದರ ಏರಿಕೆ, ವಿದ್ಯುತ್, ಹಾಲು, ನೀರಿನ ಬೆಲೆ ಏರಿಕೆ ಹಾಗೂ ಮುಡಾ ಪ್ರಕರಣ ಪ್ರತಿಪಕ್ಷಗಳಿಗೆ ಪ್ರಮುಖ ಅಸ್ತ್ರಗಳಾಗಿವೆ.
ಇನ್ನು ವಿರೋಧ ಪಕ್ಷಗಳಿಗೆ ತಿರುಗೇಟು ನೀಡಲು ಆಡಳಿತ ಪಕ್ಷ ಪ್ರತ್ಯಸ್ತ್ರವನ್ನಿಟ್ಟುಕೊಂಡಿದ್ದು, ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಆದ ಅನ್ಯಾಯ, ತೆರಿಗೆ ಪಾಲಿನ ವಂಚನೆ ಬಗ್ಗೆ ದಾಳಿ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಪ್ರಕರಣ ಹಾಗೂ ಕೋವಿಡ್ ಹಗರಣ ಕುರಿತ ಕುನ್ಹ ಸಮಿತಿ ವರದಿ ಪ್ರಸ್ತಾಪ ಮಾಡಲಿದ್ದಾರೆ. ಜೊತೆಗೆ ಮಹದಾಯಿ, ಕೃಷ್ಣ, ಮೇಕೆದಾಟು ಮೇಲ್ದಂಡೆ, ಭದ್ರಯೋಜನೆಗೆ ಸ್ಪಂದಿಸದ ಕೇಂದ್ರ ಸರ್ಕಾರ ಮುಂತಾದ ವಿಚಾರಗಳನ್ನಿಟ್ಟುಕೊಂಡು ಪ್ರತ್ಯುತ್ತರ ನೀಡಲು ಕಾಂಗ್ರೆಸ್ ಪಕ್ಷ ಸಜ್ಜಾಗಿದೆ.
ಈ ಮಧ್ಯೆ ನಾಳೆ ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಮಾರ್ಚ್.7 ರಂದು ಬಜೆಟ್ ಮಂಡನೆಯಾಗಲಿದೆ. ಅಲ್ಲದೇ ಮುಂದಿನ ವಾರ ಬಜೆಟ್ ಮುಂಗಡ ಪತ್ದ ಮೇಲೆ ಉಭಯ ಸದನಗಳಲ್ಲಿ ಸುದೀರ್ಘ ಚರ್ಚೆ ನಡೆಯಲಿದೆ.





