ಬೆಂಗಳೂರು: ವಿಧಾನಮಂಡಲದ ಜಂಟಿ ಅಧಿವೇಶನದ ವೇಳೆ ರಾಜ್ಯ ಸರ್ಕಾರದ ಭಾಷಣವನ್ನು ಸಂಪೂರ್ಣವಾಗಿ ಓದದೆ ಕೇವಲ ಎರಡು ಸಾಲಿನ ಭಾಷಣ ಓದಿ ಹಂಗಾಮ ಸೃಷ್ಟಿಸಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಇದೀಗ ಗಣರಾಜ್ಯೋತ್ಸವ ಭಾಷಣಕ್ಕೂ ಕ್ಯಾತೆ ತೆಗೆಯುವ ಮೂಲಕ ಮತ್ತೊಂದು ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದ್ದಾರೆ.
ರಾಜ್ಯಪಾಲರ ಭಾಷಣದಲ್ಲಿ ರಾಜ್ಯ ಸರ್ಕಾರ ಪುನಃ ಕೇಂದ್ರ ಸರ್ಕಾರದಿಂದ ಉಂಟಾಗಿರುವ ಅನ್ಯಾಯಗಳನ್ನು ಸೇರ್ಪಡೆ ಮಾಡಿದೆ ಎಂದು ತಿಳಿದುಬಂದಿದೆ.
ಭಾಷಣದಲ್ಲಿ ಸರ್ಕಾರದ ಇದುವರೆಗಿನ ಸಾಧನೆಗಳು, ಮುಂದಿನ ಯೋಜನೆಗಳು ಮತ್ತು ಗುರಿಗಳನ್ನು ಹೊಂದಿರುವ ಅಂಶಗಳಿರುತ್ತದೆ. ಇದನ್ನು ರಾಜ್ಯಪಾಲರ ಮೂಲಕ, ಆಯಾಯ ಸರ್ಕಾರ ಸಾರ್ವಜನಿಕರ ಮುಂದೆ ಇಡುತ್ತದೆ. ಹಾಗಾಗಿ, ಈ ಭಾಷಣವನ್ನು ಸರ್ಕಾರವೇ ಸಿದ್ದಪಡಿಸಿಕೊಡುತ್ತದೆ.
ಸಾಮಾನ್ಯವಾಗಿ ಪ್ರತಿವರ್ಷ ಜನವರಿ.26ರ ಗಣರಾಜ್ಯೋತ್ಸವದಂದು ಕಾರ್ಯಾಂಗದ ಮುಖ್ಯಸ್ಥರಾಗಿರುವ ರಾಜ್ಯಪಾಲರು ಸರ್ಕಾರ ಬರೆದು ಕೊಟ್ಟಿರುವ ಭಾಷಣವನ್ನು ಓದುವುದು ಈವರೆಗೂ ನಡೆದುಕೊಂಡು ಬಂದ ಸಂಪ್ರದಾಯವಾಗಿತ್ತು.
ಆದರೆ ಮೊದಲ ಬಾರಿಗೆ ಕರ್ನಾಟಕದಲ್ಲಿ ಶಾಸಕಾಂಗ ಹಾಗೂ ಕಾರ್ಯಾಂಗದ ನಡುವೆ ನೇರಾನೇರ ಸಂಘರ್ಷ ಏರ್ಪಟ್ಟಿದೆ. ಒಂದು ಕಡೆ ಜಂಟಿ ಅಧಿವೇಶನ ವೇಳೆ ಸರ್ಕಾರದ ಭಾಷಣವನ್ನು ಓದದೆ ಕೇವಲ ಎರಡು ಸಾಲಿನಲ್ಲಿ ಓದಿ ಹೊರ ನಡೆದ ರಾಜ್ಯಪಾಲರನ್ನು ಕೇಂದ್ರ ಸರ್ಕಾರ ವಾಪಸ್ ಕರೆಸಿಕೊಳ್ಳಬೇಕೆಂದು ಆಡಳಿತರೂಢ ಕಾಂಗ್ರೆಸ್ ಪಟ್ಟು ಹಿಡಿದಿದೆ.





