Mysore
25
clear sky

Social Media

ಗುರುವಾರ, 22 ಜನವರಿ 2026
Light
Dark

ಬೆಂಗಳೂರು ಮಳೆ ಅವಾಂತರಕ್ಕೆ ಬೇಜವಬ್ದಾರಿತನ ಕಾರಣ : ಆರ್. ಅಶೋಕ್ ಆಕ್ರೋಶ

  • ಪರಿಹಾರ ಕಾರ್ಯಕ್ಕೆ ಒಂದು ಸಾವಿರ ಕೋಟಿ ಬಿಡುಗಡೆಗೆ ಆಗ್ರಹ

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಸಂಭವಿಸಿರುವ ಮಳೆ ಅನಾಹುತ ಪರಿಹಾರ ಕಾರ್ಯಕ್ಕೆ ತಕ್ಷಣ ಒಂದು ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕರಾದ ಆರ್. ಅಶೋಕ್ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಭಾನುವಾರ ರಾತ್ರಿ ನಗರದಲ್ಲಿ 103 ರಿಂದ 130 ಮಿಲಿ ಮೀಟರ್ ವರೆಗೆ ಮಳೆ ಬಿದ್ದು ಇಡೀ ನಗರದಲ್ಲಿ ಅವಾಂತರ ಸೃಷ್ಟಿಯಾಗಿದ್ದು, ತ್ವರಿತಗತಿಯಲ್ಲಿ ಪರಿಹಾರ ಕಾರ್ಯ ಕೈಗೆತ್ತಿಕೊಂಡು ಸಂತ್ರಸ್ತರ ನೆರವಿಗೆ ಧಾವಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮುಂಗಾರು ಪೂರ್ವದ ಒಂದೇ ಒಂದು ಮಳೆ ಕಾಂಗ್ರೆಸ್ ಸರ್ಕಾರದ “ಬ್ರಾಂಡ್ ಬೆಂಗಳೂರು”ನ ನಿಜ ಬಣ್ಣ ಬಯಲು ಮಾಡಿದೆ. ಇಂತಹ ಸನ್ನಿವೇಶದಲ್ಲಿ ಸಂತ್ರಸ್ತರ ನೆರವಿಗೆ ಧಾವಿಸಬೇಕಿದ್ದ ಸಿಎಂ, ಡಿಸಿಎಂ ಮತ್ತು ಸಚಿವರು ಸಾಧನಾ ಸಮಾವೇಶದಲ್ಲಿ ಮೆರೆದಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾನುವಾರ ಮಧ್ಯ ರಾತ್ರಿಯಿಂದಲೇ ನಗರದ ನಾನಾ ಪ್ರದೇಶಗಳಿಂದ ತಮಗೆ ದೂರವಾಣಿ ಕರೆಗಳ ಮಹಾಪೂರ ಹರಿದು ಬರುತ್ತಿದೆ. ಅನೇಕ ಬಡಾವಣೆಗಳು ಜಲಾವೃತವಾಗಿವೆ, ನೂರಾರು ವಾಹನಗಳು ಪ್ರವಾಹದಲ್ಲಿ ತೇಲಿ ಹೋಗಿವೆ, ಅನಾಥಾಶ್ರಮಕ್ಕೂ ನೀರು ನುಗ್ಗಿದೆ, ಇಡೀ ರಾತ್ರಿ ಜನರು ಜಾಗರಣೆ ಮಾಡುತ್ತಿದ್ದಾರೆ, ಅವರಿಗೆ ಊಟದ ವ್ಯವಸ್ಥೆ ಇಲ್ಲ, ಇಷ್ಟಾದರೂ ಬಿಬಿಎಂಪಿ ನೆರವಿಗೆ ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೊಣೆಗೇಡಿತನದ ಪರಮಾವಧಿ:- ಕಳೆದ ಮುಳುಗಡೆಯಾಗಿದ್ದ ಸಾಯಿ ಬಡಾವಣೆ, ನಂದಗೋಕುಲ ಬಡಾವಣೆ ಸೇರಿದಂತೆ ಅನೇಕ ಬಡಾವಣೆಗಳಿಗೆ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಪಾಲಿಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಶಾಶ್ವತ ಪರಿಹಾರದ ಭರವಸೆ ನೀಡಿದ್ದರು. ಆದರೆ, ಅದು ಮಾತಿನಲ್ಲೇ ಉಳಿದು ಈ ಸಲ ಮತ್ತೆ ಆ ಬಡಾವಣೆಗಳು ನೀರಿನಲ್ಲಿ ಮುಳುಗಿವೆ. ಆದರೂ ನಿವಾಸಿಗಳ ಅಳಲು ಕೇಳಲು ಯಾರೂ ಮುಂದಾಗಿಲ್ಲ ಎಂದು ಟೀಕಿಸಿದ್ದಾರೆ.

ಮೂರು ವ್ಯಾಲಿಗಳಲ್ಲೂ ಪ್ರವಾಹ:- ಹೆಬ್ಬಾಳ, ಕೋರಮಂಗಲ ಮತ್ತು ವೃಷುಭಾವತಿ ವ್ಯಾಲಿಯಲ್ಲಿ ಪ್ರವಾಹ ಬಂದಿದೆ. ಇನ್ನೂ ಮೂರು – ನಾಲ್ಕು ದಿನ ಭಾರಿ ಮಳೆ ಬೀಳುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತಕ್ಷಣ ತುರ್ತು ಪರಿಹಾರ ಕಾರ್ಯಪಡೆ ರಚಿಸಿ, ಸಹಾಯವಾಣಿ ಆರಂಭಿಸಬೇಕು.

ನೀರು ನುಗ್ಗಿರುವ ಮನೆಗಳಿಗೆ ತಲಾ ಕನಿಷ್ಠ ಒಂದು ಲಕ್ಷ ರೂ. ಪರಿಹಾರ ವಿತರಿಸಬೇಕು. ಆ ಮನೆಯವರಿಗೆ ಊಟ, ತಿಂಡಿ ವ್ಯವಸ್ಥೆ ಮಾಡಿ ಎರಡು ತಿಂಗಳಿಗೆ ಆಗುವಷ್ಟು ಪರಿಹಾರ ವಿತರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಜಾಗತಿಕ ಮಟ್ಟದಲ್ಲಿ ಅಪಮಾನ:- ಹಿಂದಿನ ವರ್ಷದ ಲೋಪಗಳಿಂದ ಪಾಠ ಕಲಿಯದ ಸರ್ಕಾರದ ಬೇಜವಾಬ್ದಾರಿತನದಿಂದ ನಗರದಲ್ಲಿ ಅನಾಹುತ ಸಂಭವಿಸಿದೆ. ಮುಂಚಿತವಾಗಿ ಮೋರಿ, ಚರಂಡಿ, ರಾಜ ಕಾಲುವೆಗಳಲ್ಲಿ ಹೂಳು ತೆಗೆಸುವ ಕೆಲಸ ಮಾಡಬೇಕಿತ್ತು. ನಗರದ ಅನೇಕ ಕಡೆ ವೈಟ್ ಟಾಫಿಂಗ್ ಮತ್ತು ರಿಪೇರಿ ಕಾಮಗಾರಿ ನಡೆಯುತ್ತಿದ್ದು ಅಲ್ಲಿನ ಅವಶೇಷಗಳನ್ನು ತೆರವು ಮಾಡಿದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ.

ಬಿಬಿಎಂಪಿ ಮುನ್ನೆಚ್ಚರಿಕೆ ವಹಿಸದಿರುವುದೇ ಅನಾಹುತಗಳಿಗೆ ಕಾರಣ ಎಂದು ಖುದ್ದು ಗೃಹ ಸಚಿವ ಪರಮೇಶ್ವರ ಅವರು ಹೇಳಿದ್ದಾರೆ. ಉಸ್ತುವಾರಿ ಸಚಿವ ಡಿಕೆಶಿ ಅವರ ವೈಫಲ್ಯಕ್ಕೆ ಇದಕ್ಕಿಂತ ಇನ್ಯಾವುದೇ ಸರ್ಟಿಫಿಕೇಟ್ ಬೇಕಾ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ವರ್ತಿಸಿರುವ ಶಿವಕುಮಾರ್ ಅವರು, ಹಿಂದಿನ ಸರ್ಕಾರದ ಲೋಪ ಅನಾಹುತಕ್ಕೆ ಕಾರಣ ಎಂದಿದ್ದಾರೆ. ಆಗಾದರೆ ಎರಡು ವರ್ಷಗಳ ಕಾಲ ಇವರು ಕಡಿದು ಕಟ್ಟೆ ಹಾಕಿದ್ದೇನು? ಇದೇನಾ ಇವರ ಬ್ರಾಂಡ್ ಬೆಂಗಳೂರು? ಹೆಸರಿಗೆ ಮಾತ್ರ ಗ್ರೆಟರ್, ದಿನವೂ ಜನರಿಗೆ ಟಾರ್ಚರ್ ತಪ್ಪಿಲ್ಲ. ಒಂದೇ ಮಳೆಗೆ ಇವರ ಬ್ರಾಂಡ್ ಬೆಂಗಳೂರು ಕೊಚ್ಚಿ ಹೋಯ್ತು. ಜಾಗತಿಕ ಮಟ್ಟದಲ್ಲಿ ಬೆಂಗಳೂರು ಮಾನ ಹರಾಜಾಗಿದೆ ಎಂದು ಅಶೋಕ್ ಕಿಡಿ ಕಾರಿದ್ದಾರೆ.

Tags:
error: Content is protected !!