ಚಿತ್ರದುರ್ಗ: ನಕ್ಸಲರು ಸರ್ಕಾರಕ್ಕೆ ಶರಣಾಗಿಲ್ಲ, ಸರ್ಕಾರವೇ ನಕ್ಸಲರಿಗೆ ಶರಣಾಗಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ನಗರದಲ್ಲಿರುವ ಮಾದರ ಚೆನ್ನಯ್ಯ ಗುರುಪೀಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಕ್ಸಲರು ಶಸ್ತ್ರಾಸ್ತ್ರ ಬಿಟ್ಟು ಶರಣಾಗಿದ್ದಾರೆ. ಇದರಿಂದ ಇನ್ನು ಹೆಚ್ಚಾಗಿ ನಕ್ಸಲರು ಇರಬಹುದು ಎನ್ನುವ ಪ್ರಶ್ನೆ ಮೂಡಿದೆ. ಸಿಎಂ ಮುಂದೆ ನಕ್ಸಲರ ಶರಣಾಗತಿ ಸರಿಯಲ್ಲ. ಕೋರ್ಟ್, ಪೊಲೀಸರ ಮುಂದೆ ನಕ್ಸಲರನ್ನು ನಿಲ್ಲಿಸಿದರೆ ನಿಜಾಂಶ ತಿಳಿಯುತ್ತದೆ ಎಂದು ಹೇಳಿದ್ದಾರೆ.
ಈ ಸರ್ಕಾರ ಸಂಪೂರ್ಣವಾಗಿ ಭ್ರಷ್ಟಚಾರದಲ್ಲಿ ಮುಳುಗಿದೆ. ನಾನು ಸಿಎಂ, ನೀನು ಸಿಎಂ ಆಗಬೇಕೆಂಬ ಪೈಪೋಟಿಯಲ್ಲಿ ಬಿದ್ದಿದ್ದಾರೆ. ಒಡೆದು ಆಳುವ ನೀತಿ ರಾಜ್ಯದಲ್ಲಿದೆ ಎಂದರು.
ಈ ಪಕ್ಷದಲ್ಲಿ ದಲಿತ ಮಾಫಿಯಾ ಇದೆ. ಖರ್ಗೆ, ಮುನಿಯಪ್ಪ, ಎಚ್.ಸಿ. ಮಹದೇವಪ್ಪ ಅವರ ಕುಟುಂಬಗಳು ಕಾಂಗ್ರೆಸ್‌ನಲ್ಲಿ ಹಿಡಿತ ಸಾಧಿಸಿವೆ. ಇವರನ್ನ ಹೊರತುಪಡಿಸಿ ಇನ್ನು ಯಾವ ದಲಿತ ನಾಯಕರಿಗೂ ಕಾಂಗ್ರೆಸ್‌ನಲ್ಲಿ ಬೆಳೆಯಲು ಅವಕಾಶ ಇಲ್ಲದಂತಾಗಿದೆ. ಕಾಂಗ್ರೆಸ್ ನಾಶವಾಗುವ ಸ್ಥಿತಿಯಲ್ಲಿದೆ ಎಂದು ಕಿಡಿಕಾರಿದರು.
ಇನ್ನು ಮುಡಾ ಹಗರಣದಲ್ಲಿ ಜಿಟಿಡಿ ಫ್ಯಾಮಿಲಿ ಸೈಟ್ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಇದು 14 ಸೈಟ್‌ಗಳ ವಿಚಾರವಲ್ಲ, ಸಾವಿರಾರು ಸೈಟ್‌ಗಳ ವಿಚಾರ. ಈ ಪ್ರಕರಣವನ್ನು ಸಿಬಿಐಗೆ ವಹಿಸಿದರೆ ನಿಜಾಂಶ ಹೊರಬರಲಿದೆ. ಇದರಲ್ಲಿ ನಮ್ಮವರು, ತಮ್ಮವರು ಎಂಬ ಪ್ರಶ್ನೆಯೆ ಇಲ್ಲ. ನಮ್ಮ ಸಂಬಂಧಿಗಳು ಇದ್ದರು ನಾನು ಇದನ್ನೇ ಮಾತನಾಡುವುದು. ಜನಪರ ವ್ಯವಸ್ಥೆ ಆಗಬೇಕೆ ಹೊರತು, ಕುಟುಂಬದ ಸ್ವಾರ್ಥದ ವ್ಯವಸ್ಥೆ ಆಗಬಾರದು ಎಂದು ಹೇಳಿದರು.