ಬೆಂಗಳೂರು: ನಾಡಹಬ್ಬ ಮೈಸೂರು ದಸರಾ ಪ್ರಯುಕ್ತ ಸಾಲು ಸಾಲು ದಸರಾ ರಜೆಗಳ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಅಕ್ಟೋಬರ್.9ರಿಂದ 12ರವರೆಗೆ 2,000 ಹೆಚ್ಚುವರಿ ಬಸ್‌ಗಳನ್ನು ಕೆಎಸ್‌ಆರ್‌ಟಿಸಿ ವ್ಯವಸ್ಥೆ ಮಾಡಿದೆ.
ಕೆಎಸ್‌ಆರ್‌ಟಿಸಿ ನಿಗಮವು ದಸರಾ ರಜೆಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚುವರಿ ಬಸ್ ಸೌಲಭ್ಯ ಮಾಡಿದ್ದು, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ಫ್ಲೈ ಬಸ್ ಮೂಲಕ ನೇರ ಸಾರಿಗೆ ಸೌಲಭ್ಯ ಕಲ್ಪಿಸಿದೆ. ಅಲ್ಲದೇ ಜಲದರ್ಶಿನಿ, ಗಿರಿದರ್ಶಿನಿ ಮತ್ತು ದೇವದರ್ಶಿನಿಗಳ ವಿಶೇಷ ಪ್ರವಾಸ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಈ ಹೆಚ್ಚುವರಿ ಬಸ್‌ಗಳು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಬಸ್ ನಿಲ್ದಾಣ ಹಾಗೂ ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣದಿಂದ ಕಾರ್ಯ ನಿರ್ವಹಿಸಲಿವೆ. ಮೈಸೂರು, ಮಡಿಕೇರಿ, ಮಂಡ್ಯ, ಮಳವಳ್ಳಿ, ಎಚ್.ಡಿ.ಕೋಟೆ, ಚಾಮರಾಜನಗರ, ಹುಣಸೂರು, ಕೆ.ಆರ್.ನಗರ ಹಾಗೂ ಗುಂಡ್ಲುಪೇಟೆ ಸೇರಿದಂತೆ ಇನ್ನಿತರ ಪ್ರವಾಸಿ ತಾಣದ ಕೇಂದ್ರಗಳಿಗೆ ಭೇಟಿ ನೀಡುವ ಪ್ರವಾಸಿಗರ ಅಗತ್ಯತೆಗಳನ್ನು ಪೂರೈಸಲು ಮೈಸೂರಿನಿಂದ 400 ವಿಶೇಷ ಬಸ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ.
ಈ ವಿಶೇಷ ಬಸ್‌ಗಳಿಗೆ ಗಿರಿದರ್ಶಿನಿ ಎಂದು ಹೆಸರಿಸಲಾಗಿದ್ದು, ಮೈಸೂರಿನಿಂದ ಬರುವ ಪ್ರವಾಸಿಗರಿಗೆ ಒಂದು ದಿನದ ವಿಶೇಷ ಪ್ಯಾಕೇಜ್ ಪ್ರವಾಸದಂತೆ ಬಂಡಿಪುರ, ಬಿ.ಆರ್.ಹಿಲ್ಸ್, ಗೋಪಾಲಸ್ವಾಮಿ ಬೆಟ್ಟ ಹಾಗೂ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡುವ ಅವಕಾಶ ಸೌಲಭ್ಯವನ್ನು ಒದಗಿಸಲಾಗಿದೆ. ಮಕ್ಕಳಿಗೆ 250 ರೂ. ಹಾಗೂ ಹಿರಿಯರಿಗೆ 400 ರೂ.ಗಳ ಮಿತಿಯಲ್ಲಿ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ.
ಈ ಹೆಚ್ಚುವರಿ ಬಸ್‌ಗಳಲ್ಲಿ ಸಂಚರಿಸಲು ನಾಲ್ಕು ಅಥವಾ ಅದಕ್ಕಿಂತ ಅಧಿಕ ಪ್ರಯಾಣಿಕರು ಒಟ್ಟಿಗೆ ಮುಂಚಿತವಾಗಿ ಟಿಕೆಟ್ ಖರೀದಿಸಿದ್ದರೆ ಶೇ.5 ರಷ್ಟು ಮತ್ತು ಪ್ರವಾಸಕ್ಕೆ ಒಂದು ಕಡೆಯಿಂದ ಹೋಗಿ ಬರುವುದಕ್ಕೆ ಒಟ್ಟಿಗೆ ಟಿಕೆಟ್ ಖರೀದಿಸಿದ್ದರೆ ಶೇ.10ರಷ್ಟು ಪ್ರಯಾಣದ ದರದಲ್ಲಿ ರಿಯಾಯಿತಿ ಸಿಗಲಿದೆ. ಆಸ್ತಕರು www.ksrtc.karnataka.gov.in ವೈಬ್‌ಸೈಟ್ ಅಥವಾ ಮೊಬೈಲ್ ಮುಖಾಂತರ ಇ-ಟಿಕೆಟನ್ನು ಕಾಯ್ದಿರಿಸಬಹುದು ಎಂದು ಮಾಹಿತಿ ನೀಡಲಾಗಿದೆ.