ಬೆಂಗಳೂರು: ರಾಜ್ಯದಲ್ಲಿ ಸುಮಾರು 20 ಲಕ್ಷಕ್ಕೂ ಹೆಚ್ಚು ವಿಶೇಷ ಚೇತನರಿದ್ದು, ಅವರಿಗೆ ಶಿಕ್ಷಣ ಉದ್ಯೋಗವಕಾಶ ಕಲ್ಪಿಸಲು ನಮ್ಮ ಸರ್ಕಾರ ಹೊಸ ನೀತಿ ರೂಪಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ಬಿಎಂಎಸ್ ಮಹಿಳಾ ಕಾಲೇಜಿನಲ್ಲಿ ಶನಿವಾರ ವಿಶೇಷ ಚೇತನರಿಗೆ ಆಯೋಜಿಸಿದ್ದ ಜಾಬ್ ಹಬ್ಬದಲ್ಲಿ ಅವರು ಮಾತನಾಡಿದರು.
ವಿಶೇಷ ಚೇತನ ಉದ್ಯೋಗಾಕಾಂಕ್ಷಿಗಳು, ಉದ್ಯೋಗದಾತರು, ತರಬೇತಿ ಪಾಲುದಾರರು ಮತ್ತು ನಾಗರಿಕ ಸಮಾಜವನ್ನು ಈ ಜಾಬ್ ಹಬ್ಬ ಒಟ್ಟುಗೂಡಿಸಿದೆ.
ಇದು ಅಪರೂಪದ ಕಾರ್ಯಕ್ರಮವಾಗಿದೆ. ವಿಶೇಷ ಚೇತನರು ಸಮರ್ಥರು, ಅವರಿಗೆ ಕೌಶಲ ಪೂರ್ಣ ಮತ್ತು ಉತ್ತಮ ಸಮಾಜ ನಿರ್ಮಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ವಿಶೇಷ ಚೇತನರಿಗೆ ಖಾಸಗಿ ವಲಯದಲ್ಲಿ ಶೇಕಡಾ.5ರಷ್ಟು ಉದ್ಯೋಗ ಮೀಸಲಾತಿ ಕಲ್ಪಿಸಲು ಸರ್ಕಾರ ಈಗಾಗಲೇ ಕರ್ನಾಟಕ ಉದ್ಯೋಗ ಮತ್ತು ಶಿಕ್ಷಣದಲ್ಲಿ ವಿಶೇಷ ಚೇತನ ವ್ಯಕ್ತಿಗಳ ಹಕ್ಕುಗಳ ಕಾಯ್ದೆ ಜಾರಿಗೆ ತಂದಿದೆ ಎಂದು ಹೇಳಿದರು.





