ಕೊಪ್ಪಳ : ಹತ್ತನೇ ತರಗತಿ ಓದುತ್ತಿದ್ದ ಬಾಲಕಿ ಹಾಸ್ಟೆಲ್‌ನ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿರುವ ಘಟನೆ ಬುಧವಾರ ನಡೆದಿದೆ.
ಜಿಲ್ಲೆಯ ಕುಕನೂ ತಾಲ್ಲೂಕಿನ ಗ್ರಾಮವೊಂದರ ಡಿ.ದೇವರಾಜ ಅರಸ್ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಈ ಘಟನೆ ನಡೆದಿದ್ದು, ಬಾಲಕಿ ಗರ್ಭಿಣಿಯಾಗಲು ಕಾರಣವಾದ ಆರೋಪದ ಮೇಕೆ ಯುವಕನೊರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲಕಿಯ ರಕ್ಷಣೆಗೆ ನಿಗಾ ವಹಿಸದ ವಸತಿ ನಿಲಯದ ಮೇಲ್ವಿಚಾರಕಿ ಶಶಿಕಲಾ ಹಿರೇಮಠ, ಅಡುಗೆ ಕೆಲಸಗಾರರಾಗಿದ್ದ ಪಾರ್ವತಿ ಕುದಿರಿಮೋತಿ ಹಾಗೂ ಪ್ರಿಯಾಂಕಾ ಸಿಂಧೋಗಿ ಅವರನ್ನು ಅಮಾನತು ಮಾಡಲಾಗಿದೆ.
ಇದನ್ನು ಓದಿ: ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಆರೋಪ: ಸುಪ್ರೀಂಕೋರ್ಟ್ ಕದ ತಟ್ಟಿದ ಮಾಜಿ ಸಿಎಂ ಯಡಿಯೂರಪ್ಪ
ಆರೋಪಿ ಹನುಮನಗೌಡ, ಶಶಿಕಲಾ, ಶಿಕ್ಷಕರಾದ ಪ್ರಭಾಕರ ಭಜಂತ್ರಿ, ಯಂಕಪ್ಪ ಪೂಜಾರ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಕುಕನೂರು ತಂಡದ ವೈದ್ಯಾಧಿಕಾರಿಗಳಾದ ಭರತೇಶ ಹಿರೇಮಠ ಹಾಗೂ ಸಬೀಯಾ ಅವರ ಮೇಲೆ ಎಫ್‌ಐಆರ್ ದಾಖಲಾಗಿದೆ.
ವಸತಿ ನಿಲಯವಿರುವ ಗ್ರಾಮದ ಶಾಲೆಯಲ್ಲಿ ಎಂಟನೇ ತರಗತಿಯಿಂದಲೇ ಓದುತ್ತಿರುವ ಬಾಲಕಿಗೆ ಆರೋಪಿ ಮೊದಲಿನಿಂದ ಪರಿಚಿತನಾಗಿದ್ದ. ಹನುಮನಗೌಡ ನನ್ನನ್ನು ಪ್ರೀತಿಸುತ್ತಿದ್ದ. ಮುಂದೆ ಮದುವೆಯಾಗುವುದಾಗಿ ಹೇಳಿ ಶಾಲೆ ಬಿಟ್ಟ ನಂತರ ಹಲವು ಬಾರಿ ಆತ ಲೈಂಗಿಕ ಸಂಪರ್ಕ ಮಾಡಿದ್ದಾನೆಂದು ಬಾಲಕಿ ಹೇಳಿಕೆ ನೀಡಿದ್ದಾಳೆ.
ಬುಧವಾರ ಬೆಳಿಗ್ಗೆ 5.30ರ ಸುಮಾರಿಗೆ ಬಾಲಕಿಗೆ ವಿಪರೀತ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಶೌಚಾಲಯಕ್ಕೆ ತೆರಳಿದಾಗ ಅಲ್ಲಿಯೇ ಗಂಡುಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ ನೀಡಿದ ದೂರಿನ ಮೇರೆಗೆ ಕುಕನೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.





