ಬೆಂಗಳೂರು: ಸಿಎಂ ಸಿದ್ದರಾಮಯ್ಯನವರೇ ಮಹಿಳಾ ಸುರಕ್ಷತೆಯ ಗ್ಯಾರಂಟಿ ಯಾವಾಗ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣವನ್ನು ವಿಪಕ್ಷ ನಾಯಕ ಆರ್.ಅಶೋಕ್ ಖಂಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯದಿಂದಲೇ ಈ ಅಮಾನವೀಯ ಘಟನೆ ನಡೆದಿದ್ದು, ಮಹಿಳೆಯರಿಗೆ ಸುರಕ್ಷತೆಯ ಗ್ಯಾರಂಟಿ ಯಾವಾಗ ನೀಡುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಲ್ಕತ್ತಾ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಖಂಡಿಸಿ ರಾಜ್ಯದಲ್ಲಿ ವೈದ್ಯರು ಬೃಹತ್ ಹೋರಾಟ ಕೈಗೊಂಡ ಸಮಯದಲ್ಲಿ ಈ ಪರಿ ರಾಜಧಾನಿ ಬೆಂಗಳೂರಿನಲ್ಲಿ ಯುವತಿಯ ಅತ್ಯಾಚಾರವಾಗಿದೆ ಎಂದರೆ, ಕಾಂಗ್ರೆಸ್ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿ ಅರಾಜಕತೆ ಸೃಷ್ಟಿಸಿರುವುದೇ ಕಾರಣ ಎಂದು ವಾಗ್ದಾಳಿ ನಡೆಸಿದ್ದಾರೆ.
ಭ್ರಷ್ಟ ಸಿಎಂ ಸಿದ್ದರಾಮಯ್ಯ, ಅಸಮರ್ಥ ಗೃಹ ಸಚಿವ ಪರಮೇಶ್ವರ್, ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆಶಿ ಅವರು ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರಿಯಲು ಯೋಗ್ಯತೆಯಿಲ್ಲ. ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ಕಾನೂನಿಗೆ ಬೆಲೆ ಕೊಡದ ಕಾಂಗ್ರೆಸ್ಸಿನಿಂದ ರಾಜ್ಯದಲ್ಲಿ ಜನಸಾಮಾನ್ಯರಿಗೆ ಸುರಕ್ಷತೆ ಸಿಗಲು ಸಾಧ್ಯವೇ ಇಲ್ಲ ಎಂದು ಕಿಡಿಕಾರಿದ್ದಾರೆ.