ಬೆಂಗಳೂರು: ರಾಜ್ಯ ಸರ್ಕಾರ ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ಸುಗ್ರೀವಾಜ್ಞೆ ತರಲು ತೀರ್ಮಾನಿಸಿದ್ದು, ಇದರಲ್ಲಿ ರಾಜ್ಯಪಾಲರು ಏನಾದರೂ ಬದಲಾವಣೆಗೆ ಸೂಚನೆ ನೀಡಿದರೆ ಅದನ್ನು ಬದಲಾವಣೆ ಮಾಡಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು(ಫೆಬ್ರವರಿ.5) ಸುಗ್ರೀವಾಜ್ಞೆಗೆ ರಾಜ್ಯಪಾಲತಿ ಸಹಿ ಹಾಕುವ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ರಾಜ್ಯಪಾಲರಿಗೆ ಕರಡು ಕಳಿಸಲಾಗಿದೆ. ಅವರು ಇಂದು ಸಹಿ ಹಾಕುವ ನಿರೀಕ್ಷೆ ಇದೆ. ಬಹುಶಃ ರಾಜ್ಯಪಾಲರು ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ ಅಂತಿಮವಾಗಿ ಸಹಿ ಹಾಕುವ ಸಾಧ್ಯತೆಗಳಿವೆ. ಅವರು ಸಹಿ ಹಾಕಿದರೆ ಇಂದೇ ಸುಗ್ರೀವಾಜ್ಞೆ ಜಾರಿಗೊಳಿಸಲಾಗುವುದು ಎಂದರು.
ಇದೇ ವೇಳೆ ಬಿಲ್‌ನಲ್ಲಿ ಕೆಲ ಬದಲಾವಣೆಗೆ ರಾಜ್ಯಪಾಲರು ಸೂಚಿಸಿದ್ದಾರೆಂಬ ಬಗ್ಗೆ ಮಾತನಾಡಿದ ಅವರು, ರಾಜ್ಯಪಾಲರು ಬದಲಾವಣೆಗೆ ಸೂಚನೆ ನೀಡಿರುವ ಕುರಿತು ನನಗೆ ಮಾಹಿತಿ ಇಲ್ಲ. ಈ ಮಾಹಿತಿ ರಾಜ್ಯ ಸರ್ಕಾರಕ್ಕೆ ಅಧಿಕೃತವಾಗಿ ರವಾನೆಯಾಗಿಲ್ಲ. ಆದರೆ ಅವರು ಕೆಲ ಅಂಶಗಳನ್ನು ಬದಲಾವಣೆ ಮಾಡಬೇಕೆಂದು ಸೂಚಿಸಿದರೆ, ಖಂಡಿತವಾಗಿಯೂ ಬದಲಾಯಿಸಿ ಮತ್ತೊಂದು ಬಾರಿ ರಾಜಭವನಕ್ಕೆ ಕಳುಹಿಸುತ್ತೇವೆ ಎಂದು ಹೇಳಿದರು.