ಕರ್ನಾಟಕದಲ್ಲಿನ ಅಂಗಡಿ, ಮುಂಗಟ್ಟುಗಳಲ್ಲಿ ಕನ್ನಡ ಭಾಷೆ ಬಳಕೆ ಹೆಚ್ಚಿರಬೇಕು ಎಂಬ ಕೂಗು ಆಗಿಂದಾಗ್ಗೆ ಕೇಳಿಬರುತ್ತಲೇ ಇದ್ದು, ಇತ್ತೀಚೆಗಷ್ಟೇ ಈ ವಿಚಾರವಾಗಿ ಪ್ರತಿಭಟನೆಗಳು ನಡೆದಿವೆ ಹಾಗೂ ರಾಜ್ಯ ಸರ್ಕಾರ ಅಂಗಡಿ ಮುಂದಿನ ಬೋರ್ಡ್‌ಗಳಲ್ಲಿ 60% ಕನ್ನಡ ಕಡ್ಡಾಯ ಎಂಬ ನಿಯಮವನ್ನೂ ಸಹ ಜಾರಿಗೆ ತಂದಿದೆ.
ಈ ಮಹತ್ವದ ತೀರ್ಮಾನ ಕನ್ನಡಿಗರಲ್ಲಿ ಖುಷಿ ತಂದಿದ್ದು, ಇದೀಗ ರಾಜ್ಯದಲ್ಲಿನ ಪೆಟ್ರೋಲ್ ಬಂಕ್ ಗಳಲ್ಲಿ ಇಂಧನದ ದರ ಪ್ರದರ್ಶನ ಕನ್ನಡದಲ್ಲಿಯೂ ಸಹ ಇರಲಿದೆ ಎಂದು ಕೇಂದ್ರ ಪೆಟ್ರೊಲಿಯಂ ಸಚಿವ ಹರ್ದೀಪ್ ಸಿಂಗ್ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಕಸಿತ ಭಾರತ್ ಸಂಕಲ್ಪ ಯಾತ್ರೆಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹರ್ದೀಪ್ ಸಿಂಗ್ ಇಂಧನ ಬೆಲೆಗಳ ಪ್ರದರ್ಶನ ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಮಾತ್ರ ಇದ್ದು ಕನ್ನಡದಲ್ಲೂ ಬೇಕು ಎಂಬ ಮನವಿ ಇತ್ತು. ಅದರಂತೆ ಇಂದಿನಿಂದ ( ಜನವರಿ 10 ) ಕನ್ನಡದಲ್ಲಿ ಪೆಟ್ರೋಲ್ ದರಗಳ ಪ್ರದರ್ಶನವಾಗಲಿದೆ ಎಂದು ತಿಳಿಸಿದರು.