ಬೆಂಗಳೂರು: ಕೇಂದ್ರ ಸರ್ಕಾರವು ಸರಕು ಸೇವಾ ತೆರಿಗೆ ಪರಿಷ್ಕರಣೆ ಮಾಡಿ ದೇಶದ ಜನತೆಗೆ ಬೆಲೆ ಏರಿಕೆ ಬಿಸಿ ತಗ್ಗಿಸಿದ ಬೆನ್ನಲ್ಲೇ ಸೋಮವಾರದಿಂದಲೇ (ಸೆ.22) ಅನ್ವಯವಾಗುವಂತೆ ನಂದಿನಿಯ ಕೆಲ ಉತ್ಪನ್ನಗಳ ದರ ಇಳಿಕೆಯಾಗಲಿದೆ.
ಕೇಂದ್ರ ಸರ್ಕಾರದ ಸೂಚನೆಯಂತೆ ಕೆಎಂಎಫ್ ನಂದಿನಿ ಉತ್ಪನ್ನಗಳ ಬೆಲೆ ಇಳಿಕೆ ಸಾಧ್ಯತೆಯಿದೆ. ದರ ಇಳಿಕೆ ಸಂಬಂಧ ಕೆಎಂಎಫ್‌ನ ಹಿರಿಯ ಅಧಿಕಾರಿಗಳ ಜೊತೆ ಮಹತ್ವದ ಸಭೆ ಕೂಡ ನಡೆಸಲಿದೆ. ಆಹಾರ ಉತ್ಪನ್ನಗಳ ಮೇಲಿನ ಜಿಎಸ್‌ಟಿಯನ್ನ ಶೇ.12ರಿಂದ 5ಕ್ಕೆ ಇಳಿಕೆ ಮಾಡುವ ಸಾಧ್ಯತೆ ಇದೆ. ಹೀಗಾಗಿ ಮೊಸರು, ತುಪ್ಪ, ಬೆಣ್ಣೆ, ಲಸ್ಸಿ ಸೇರಿದಂತೆ ನಂದಿನಿಯ ವಿವಿಧ ಉತ್ಪನ್ನಗಳ ದರ ಇಳಿಕೆಯಾಗಲಿದೆ ಎನ್ನಲಾಗಿದೆ.
ಬೆಣ್ಣೆ, ತುಪ್ಪ, ಚೀಸ್ ಮೇಲೆ ಮೊದಲು 12%ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. ಆದರೆ ಈ ತೆರಿಗೆಯನ್ನು 5%ಕ್ಕೆ ಇಳಿಸಿದ್ದರಿಂದ ಈ ಉತ್ಪನ್ನಗಳ ಬೆಲೆ ಇಳಿಕೆಯಾಗಲಿದೆ.
ಪನ್ನಿರ್ ಮತ್ತು ಯುಹೆಚ್‌ಟಿ ಹಾಲಿಗೆ(ಗುಡ್ ಲೈಫ್) ಮೊದಲು 5% ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿತ್ತು. ಆದರೆ ಈಗ ಈ ಉತ್ಪನ್ನಗಳ ಮೇಲೆ ಶೂನ್ಯ ತೆರಿಗೆ ಹಾಕಲಾಗುತ್ತದೆ. ಹೀಗಾಗಿ ಈ ವಸ್ತುಗಳ ಬೆಲೆ ಇಳಿಕೆಯಾಗುತ್ತಿದೆ.
ಮೊಸರು ದರ ಇಳಿಕೆ ಸಾಧ್ಯತೆ: ಮೊಸರಿನ ದರ ಲೀಟರ್‌ಗೆ 4 ರೂಪಾಯಿ ವರೆಗೆ ಕಡಿಮೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅಧಿಕಾರಿಗಳ ಜೊತೆ ಸಭೆ ಬಳಿಕ ನಿರ್ಧಾರ ತೆಗೆದುಕೊಳ್ಳಲಿದ್ದು, ಸೋಮವಾರದಿಂದಲೇ ಪರಿಷ್ಕೃತ ದರ ಜಾರಿಗೊಳಿಸುವಂತೆ ಮಾರಾಟಗಾರರಿಗೆ ಸೂಚನೆ ನೀಡುವ ಸಾಧ್ಯತೆ ಇದೆ.
2017ರಲ್ಲಿ ಹಾಲಿನ ಉತ್ಪನ್ನಗಳ ಮೇಲೆ ಜಿಎಸ್‌ಟಿ ಜಾರಿಗೊಳಿಸಲಾಗಿತ್ತು. ಇದಾದ ಬಳಿಕ 2022ರಲ್ಲಿ ಜಿಎಸ್‌ಟಿಯನ್ನು ಶೇ 12ಕ್ಕೆ ಹೆಚ್ಚಿಸಲಾಗಿತ್ತು. ಈಗ ತೆರಿಗೆ ದರ ಕಡಿಮೆ ಮಾಡಿರುವುದರಿಂದ ಗ್ರಾಹಕರಿಗೆ ಸ್ವಲ್ಪ ಮಟ್ಟಿಗೆ ಹೊರೆ ಕಡಿಮೆಯಾಗಿದೆ.





