ಬೆಂಗಳೂರು: ಮಾಜಿ ಪ್ರೇಯಸಿಗೆ ಅಶ್ಲೀಲ ಸಂದೇಶ ಕಳುಹಿಸಿದ ಆರೋಪದ ಮೇಲೆ ಗ್ಯಾಂಗ್‌ವೊಂದು ಯುವಕನನ್ನು ಕಿಡ್ನ್ಯಾಪ್ ಮಾಡಿ ಚಿತ್ರಹಿಂಸೆ ನೀಡಿರುವ ಘಟನೆ ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಘಟನೆ ಹಿನ್ನೆಲೆ: ಕಾಲೇಜಿಗೆ ಹೋಗುತ್ತಿದ್ದಾಗ ಕುಶಾಲ್ ಹಾಗೂ ಯುವತಿಯ ನಡುವೆ ಪ್ರೀತಿ ಚಿಗುರಿತ್ತು. ಸುಮಾರು 2 ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿಯು ಕುಶಾಲ್‌ಗೆ ಗುಡ್‌ಬೈ ಹೇಳಿ ಬೇರೆ ಯುವಕನನ್ನು ಪ್ರೀತಿಸುತ್ತಿದ್ದಳು. ಇದರಿಂದ ರೊಚ್ಚಿಗೆದ್ದ ಕುಶಾಲ್ ಯುವತಿಗೆ ಅಶ್ಲೀಲ ಸಂದೇಶ ರವಾನಿಸಿದ್ದ. ನಂತರ ಈ ವಿಷಯವನ್ನು ಯುವತಿ ತನ್ನ ಗೆಳೆಯರಿಗೆ ತಿಳಿಸಿದ್ದಾಳೆ. ನಂತರ ಯುವತಿ ತನ್ನ ಗೆಳೆಯರ ಜೊತೆ ಕುಶಾಲ್‌ನನ್ನು ಕಾರಿನಲ್ಲಿ ಅಪಹರಿಸಿಕೊಂಡು ಬಂದು, ನಿರ್ಜನ ಪ್ರದೇಶದಲ್ಲಿ ಬಟ್ಟೆ ಬಿಚ್ಚಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.





