Mysore
21
overcast clouds

Social Media

ಮಂಗಳವಾರ, 03 ಡಿಸೆಂಬರ್ 2024
Light
Dark

ಪಳೆಯುಳಿಕೆ ಪಾರ್ಟಿ ಕಾಂಗ್ರೆಸ್: ಕಾಂಗ್ರೆಸ್‌ ವಿರುದ್ಧ ಜೆಡಿಎಸ್‌ ಕಿಡಿ

ಬೆಂಗಳೂರು: ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದ್ದು, ಜಾರ್ಖಂಡ್‌ ಹಾಗೂ ಮಹಾರಾಷ್ಟ್ರ ವಿಧಾನಸಭೆ ಚುನಾವಣಾ ಫಲಿತಾಂಶಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ವಿರುದ್ದ ಕಿಡಿಕಾರಿದೆ.

ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಜೆಡಿಎಸ್‌, ಕಾಂಗ್ರೆಸ್‌ ನಶಿಸುತ್ತಿರುವ ಶತಮಾನಗಳ ಪಳೆಯುಳಿಕೆ ಪಕ್ಷವಾಗಿದೆ. ಪಕ್ಷದ ಪಕಳೆಗಳು ದೇಶಾದ್ಯಂತ ಒಂದೊಂದೇ ಉದುರುತ್ತಿವೆ. ಆದರೆ ದೇಶದ ಮಹಾರಾಷ್ಟ್ರ ರಾಜ್ಯದಲ್ಲಿ 6ನೇ ಸ್ಥಾನ ಹಾಗೂ ಜಾರ್ಖಂಡ್‌ನಲ್ಲಿ 3ನೇ ಸ್ಥಾನಕ್ಕೆ ಜಾರಿ ನೆಲಕಚ್ಚಿದೆ. ಈ ಮಧ್ಯೆ ರಾಜ್ಯದಲ್ಲಿ ವಾಮಮಾರ್ಗದಲ್ಲಿ ಗೆದ್ದ ಮೂರು ಕ್ಷೇತ್ರಗಳ ಬೈಎಲೆಕ್ಷನ್ ಸೀಟುಗಳನ್ನು ಮುಖದ ಮೇಲಿಟ್ಟುಕೊಂಡು ಮೆರೆಯುತ್ತಿದೆ, ಮೆರೆಯಲಿ ಎಂದು ವಾಗ್ದಾಳಿ ನಡೆಸಿದ್ದಾರೆ.ಮಹಾರಾಷ್ಟ್ರದಲ್ಲಿ ಮತದಾರರು ಕೈ ಪಕ್ಷದ ಪೋಸ್ಟ್ ಮಾರ್ಟಮ್ ಮಾಡಿದ್ದಾರೆ. ಕಾಂಗ್ರೆಸ್ಸಿಗರೇ ಅನ್ಯರ ಬಗ್ಗೆ ಹಗುರವಾಗಿ ಮಾತಾನಾಡುವ ನಿಮ್ಮ ಹರಕು ಬಾಯಿಗಳಿಗೆ, ನಿಮ್ಮ ತೂತುಬಿದ್ದ ಮಡಿಕೆಯಂತಾಗಿರುವ ನಿಮ್ಮ ಪಕ್ಷಕ್ಕೆ ಮೊದಲು ತ್ಯಾಪೆ ಹಚ್ಚಿಕೊಳ್ಳಿ. ಬಳಿಕ 288 ಸೀಟುಗಳ ಮಹಾರಾಷ್ಟ್ರದಲ್ಲಿ ಹದಿನಾರೇ ಸೀಟಿಗೆ ಬೋರಲು ಬಿದ್ದ ಸೋಕಾಲ್ಡ್ ನ್ಯಾಷನಲ್ ಪಾರ್ಟಿ ನಾಯಕರೇ, ಇನ್ನೊಬ್ಬರ ಮನೆ ಮೂಸಿ ನೋಡುವ ಚಟ ಬಿಡಿ ಎಂದು ಕುಟುಕಿದ್ದಾರೆ.

ಇನ್ನು ಜಾರ್ಖಂಡ್ ಜೆಎಂಎಂ ಪರಾವಲಂಬಿಯಾಗಿ 81 ಸೀಟಿನ ಪೈಕಿ ಹದಿನಾರಕ್ಕೆ ಅಡ್ಡಡ್ಡ ಬಿದ್ದ ನಿಮ್ಮ ಪಕ್ಷಕ್ಕೆ ಅಲ್ಲಿಯೂ ಜನ ಚಟ್ಟ ಕಟ್ಟಿದ್ದಾರೆ. ಸರಳ ಲೆಕ್ಕ ಕಾಂಗ್ರೆಸ್ಸಿಗರೇ 288+81=369. ಇಷ್ಟರಲ್ಲಿ ಒಟ್ಟು ಎಷ್ಟು ಗೆದ್ದಿದ್ದೀರಿ? ಕೇವಲ 32 ಅದರಲ್ಲಿಯೂ ಮಹಾರಾಷ್ಟ್ರದಲ್ಲಿ 28. ಹೀಗಾಗಿ ನಿಮಗಿಂತ ನಾವು ಕಳಪೆಯೇ..? 224 ಕ್ಷೇತ್ರಗಳಲ್ಲಿ 19 ಗೆದ್ದಿದ್ದೆವು. ಅದೂ ಯಾವ ಮೈತ್ರಿಯೂ ಇಲ್ಲದೆ ನಾವು ಪ್ರಾದೇಶಿಕ, ನೀವು ಸೋಕಾಲ್ಡ್ ನ್ಯಾಶನಲ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಐರೆನ್ ಲೆಗ್ ಆಗಿರುವ ಪಾರ್ಟಿ ಕಾಂಗ್ರೆಸ್ ಆಗಿದ್ದು, ಮಹಾರಾಷ್ಟ್ರದಲ್ಲಿ ಮೈತ್ರಿ ಪಕ್ಷಗಳನ್ನು ವ್ಯವಸ್ಥಿತವಾಗಿ ಮುಗಿಸಿದೆ. ಅದಕ್ಕೆ ಬಲಿಯಾದ ಪಕ್ಷ ಉದ್ಧವ್ ಠಾಕ್ರೆಯವರ ಶಿವಸೇನೆ ಎನ್ನಬಹುದು. ಮೈತ್ರಿಗೆ, ಮೈತ್ರಿ ಪಕ್ಷಗಳಿಗೆ ಮಿತ್ರದ್ರೋಹ ಮಾಡುತ್ತಿರುವ ಕಾಂಗ್ರೆಸ್ ಸಂವಿಧಾನವನ್ನೇ ಅಣಕಿಸುತ್ತಿದೆ. ಅನ್ಯರ ಅಣಕವೇ ಮನೆಹಾಳು ಕಾಂಗ್ರೆಸ್ಸಿನ ಕಾಯಕ ಎಂದು ದೂರಿದ್ದಾರೆ.

Tags: