ಬೆಂಗಳೂರು : ಕಾನೂನು ಬಾಹಿರವಾಗಿ ಹಣ ವರ್ಗಾವಣೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ( ಮೂಡಾ)ದ ಮಾಜಿ ಆಯುಕ್ತ ದಿನೇಶ್ ಕುಮಾರ್ ಅವರನ್ನು ನ್ಯಾಯಾಲಯ 9 ದಿನಗಳ ಕಾಲ ಜಾರಿ ನಿರ್ದೇಶನಾಲಯ (ಇ.ಡಿ) ವಶಕ್ಕೆ ನೀಡಿ ನ್ಯಾಯಾಲಯ ಆದೇಶ ನೀಡಿದೆ.
ಮಂಗಳವಾರ ಇಡಿ ಮುಂದೆ ವಿಚಾರಣೆಗೆ ಹಾಜರಾಗಿದ್ದ ದಿನೇಶ್ ಕುಮಾರ್ ಅವರನ್ನು ಬಂಧಿಸಲಾಗಿತ್ತು. ನಂತರ ರಾತ್ರಿಯೇ ನ್ಯಾಯಾಧೀಶರ ಮುಂದೆ ಹಾಜರಪಡಿಸಿ ಒಂದು ದಿನದ ಮಟ್ಟಿಗೆ ಮಾತ್ರ ವಶಕ್ಕೆ ಪಡೆಯಲಾಗಿತ್ತು.
ಬುಧವಾರ ಬೆಂಗಳೂರಿನ ವಿಶೇಷ ಜನ ಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಮೂರ್ತಿ ಗಜಾನನ ಭಟ್ ಅವರಿದ್ದ ಏಕ ಸದಸ್ಯ ಪೀಠದ ಮುಂದೆ ದಿನೇಶ್ ಕುಮಾರ್ ಅವರನ್ನು ಹಾಜರುಪಡಿಸಿ ಪ್ರಕರಣ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡಬೇಕೆಂದು ಇಡಿ ಪರ ವಕೀಲರು ಮನವಿ ಮಾಡಿ ಕೊಂಡರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ದಿನೇಶ್ ಕುಮಾರ್ ಪರ ವಕೀಲರು ,ಒಂದು ವರ್ಷದಿಂದ ವಿಚಾರಣೆ ನಡೆಸದ ಇಡಿ ಅಧಿಕಾರಿಗಳು ಈಗ ಏಕೈಕ ತಮ್ಮ ವಶಕ್ಕೆ ಕೇಳುತ್ತಿದ್ದಾರೆ .ಅವರನ್ನು ಯಾವ ಕಾರಣಕ್ಕೆ ಬಂಧಿಸಲಾಗಿದೆ? ಪ್ರಕರಣ ಸಂಬಂಧಪಟ್ಟಂತೆ ಬ್ಯಾಂಕ್ ಖಾತೆಗಳು, ದಾಖಲೆಗಳು ಸೇರಿದಂತೆ ಎಲ್ಲಾ ವಿವರಗಳನ್ನು ನೀಡಲಾಗಿದೆ. ಪುನಃ ತಮ್ಮ ವಶಕ್ಕೆ ನೀಡಿ ಎಂದು ಕೇಳುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ತಮ್ಮ ಕಕ್ಷಿಧಾರರು ಅಸ್ತಮಾ, ಸಕ್ಕರೆ ಕಾಯಿಲೆ ಸೇರಿದಂತೆ ವಿವಿಧ ಕಾಯಿಲೆಯಿಂದ ಬಳಲುತ್ತಿದ್ದಾರೆ ಹೀಗಾಗಿ ಇಡಿ ವಶಕ್ಕೆ ನೀಡಬಾರದೆಂದು ವಕೀಲರಿಗೆ ಮನವಿ ಮಾಡಿದರು. ಅಂತಿಮವಾಗಿ ಎರಡು ಕಡೆ ವಾದ- ಪ್ರತಿವಾದ ಪಾಲಿಸಿದ ನ್ಯಾಯಾಧೀಶರು ದಿನೇಶ್ ಕುಮಾರ್ ಅವರನ್ನು 9 ದಿನಗಳ ಕಾಲ ಈಡಿ ವಶಕ್ಕೆ ನೀಡಿ ಆದೇಶ ನೀಡಿದರು.





