ಬೆಂಗಳೂರು : ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಯಾವುದೇ ಒಂದೇ ಒಂದು ಸಾಧನೆ ಮಾಡದಿದ್ದರೂ ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವ ಪುರುಷಾರ್ಥಕ್ಕೆ ಸಾಧನಾ ಸಮಾವೇಶ ಮಾಡುತ್ತಿದ್ದಾರೆ ಎಂದು ಬಿಜೆಪಿ ಮಾಜಿ ಸಚಿವ ಹಾಗೂ ಶಾಸಕ ಅಶ್ವತ್ಥ ನಾರಾಯಣ ಪ್ರಶ್ನಿಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಸರ್ಕಾರ ಯಾವ ಕ್ಷೇತ್ರದಲ್ಲೂ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. ಆದರೂ ಸಾಧನಾ ಸಮಾವೇಶ ಮಾಡಲು ಹೊರಟಿದೆ ಎಂದು ವಾಗ್ದಾಳಿ ನಡೆಸಿದರು.
ನಿಮ್ಮ ಸಾಧನೆ ಏನು ಅಂದರೆ, ಯಾವ ಸಚಿವರು ಎಷ್ಟು ದುಡ್ಡು ಹೊಡೆದರು ಎಂದು ಹೇಳಬೇಕು. ನಿಮ್ಮ ಸಾಧನೆ ಹಣ ಹೊಡೆದಿದ್ದು ಮಾತ್ರ. ಅವಕಾಶವಾದಿತನ ಹೇಗೆ ಬಳಸಿಕೊಂಡೆವು ಎನ್ನುವುದು. ತುಷ್ಟೀಕರಣ ಮಾಡಿ, ಕಾನೂನು ಸುವ್ಯವಸ್ಥೆ ಕುಸಿಯಲು ಅತ್ಯಂತ ಕೆಟ್ಟ ಆಡಳಿತ ನಿಮ್ಮದು ಎನ್ನುವುದೇ ಸಾಕ್ಷಿ ಎಂದು ಟೀಕಾಪ್ರಹಾರ ನಡೆಸಿದರು.
ಕಾಂಗ್ರೆಸ್ ಆಡಳಿತಕ್ಕೆ ಬಂದು ದುರಾಡಳಿತ ನೀಡುತ್ತಿದೆ. ಜನರನ್ನ ನಂಬಿಸಿ ಹೆಚ್ಚು ಬಹುಮತ ಪಡೆದಿದೆ. ಸರ್ಕಾರ ಆರಂಭದ ದಿನಗಳಿಂದಲೂ ಜನರಿಗೆ ಅನ್ಯಾಯ, ದ್ರೋಹ, ಭ್ರಷ್ಟಾಚಾರ ಮಾಡುತ್ತಾ ಬಂದಿದೆ. ಈ ರೀತಿ ಸರ್ಕಾರ ನೂರಾರು ಹಗರಣ ಮಾಡಿದೆ ಎಂದು ಆರೋಪಿಸಿದರು.
ಒಂದು ಒಳ್ಳೆಯ ಕೆಲಸ ಮಾಡಿಲ್ಲ. ಒಂದೇ ಒಂದು ಸಾಧನೆ ಮಾಡದಿದ್ದರೂ ಮೈಸೂರಿನಲ್ಲಿ ಸಾಧನಾ ಸಮಾವೇಶ ಮಾಡಲು ಹೊರಟಿದ್ದಾರೆ. ಯಾವ ಆತ್ಮಸಾಕ್ಷಿಯ ಮೇಲೆ ಸಮಾವೇಶ ಮಾಡಲು ಹೊರಟಿದ್ದಾರೆ. ಮುಡಾ ಹಗರಣ ನಡೆದಿದೆ, ಸಿಎಂ ಆದವರು ಈ ಬಗ್ಗೆ ಏನು ಹೇಳುತ್ತಾರೆ. ನಿವೇಶನ ಏಕೆ ವಾಪಸ್ ಕೊಟ್ಟಿದ್ದಾರೆ ಎಂದು ಪ್ರಶ್ನೆ ಮಾಡಿದರು.
ಕಮೀಷನ್ ಪಡೆದು, ಶೇ. 80-90 ರಷ್ಟು ಭ್ರಷ್ಟಾಚಾರ ಮಾಡಿದ್ದಾರೆ. ಅನೇಕರು ಹಣದ ವಿಚಾರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸರ್ಕಾರದ ಅವಧಿಯಲ್ಲಿ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತಿಹಾಸದಲ್ಲಿ ಮೊದಲ ಬಾರಿಗೆ ಅಧಿಕಾರಿಗಳೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸ್ಮಾರ್ಟ್ ಮೀಟರ್ ಹಗರಣ, ಬೆಲೆ ಏರಿಕೆ, ಮಹಾರಾಷ್ಟ್ರದಲ್ಲಿ ವಿದ್ಯುತ್ ದರ ಇಳಿಸುತ್ತಿದ್ದಾರೆ. ಇಲ್ಲಿ ನೋಡಿದರೆ ಪ್ರತಿಯೊಂದು ದರ ಹೆಚ್ಚಳ ಮಾಡುತ್ತಿದ್ದಾರೆ. ಔಷಧಿ ಕೊಡಲಾಗದ ಸರ್ಕಾರ, ಬಾಣಂತಿಯರ ಸರಣಿ ಸಾವಾಗಿದೆ. ಕಾಲ್ತುಳಿತದಿಂದ ಸಾವು ನಡೆದಿದೆ, ಅದನ್ನೂ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಗ್ಯಾರಂಟಿ ದುಡ್ಡು ಕೊಡಲು, ಗ್ಯಾರಂಟಿ ಇಲ್ಲ ಅಂತಿದ್ದಾರೆ. ಗ್ಯಾರಂಟಿ ಸಮಿತಿ ಸದಸ್ಯರೇ ದುಡ್ಡು ಕೊಡಲು ಹಣ ಇಲ್ಲ ಎನ್ನುತ್ತಾರೆ. ಅದೇನು ಸಂಬಳಾನಾ ಕೊಡೋಕೆ ಅಂತಿದ್ದಾರೆ. ನೇರವಾಗಿ ಜನರ ಜೇಬಿಂದ ಹಣ ತಗೋತಿದ್ರೆ, ಅದು ಕಾಂಗ್ರೆಸ್ ಸರ್ಕಾರ ಎಂದು ಕಿಡಿಕಾರಿದರು.





