ಬೆಂಗಳೂರು : ಕಲಬುರಗಿ ಸೇರಿ ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಮಳೆ ಮತ್ತು ನೆರೆ ಹಾನಿಯಿಂದ ಜನರು ಬಸವಳಿಯುತ್ತಿದ್ದರೂ ಜನತೆಯ ನೆರವಿಗೆ ಧಾವಿಸದ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಜೆಡಿಎಸ್ ಪಕ್ಷವು, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಉತ್ತರ ಕರ್ನಾಟಕ ಭಾಗದ ನೆರೆಪೀಡಿತ ಜಿಲ್ಲೆಗಳ ಉಸ್ತುವಾರಿ ಸಚಿವರುಗಳ ವಿರುದ್ಧ ಹರಿಹಾಯ್ದಿದೆ.
ಇದನ್ನೂ ಓದಿ:-ಅಟಾರ್ನಿ ಜನರಲ್ ಆಗಿ ಆರ್.ವೆಂಕಟರಮಣಿ ಮರುನೇಮಕ
ಉತ್ತರ ಕರ್ನಾಟಕ ಭಾಗದ ಉಸ್ತುವಾರಿ ಸಚಿವರೇ ಎಲ್ಲಿದ್ದೀರಿ? ಎಲ್ಲಿ ಮಾಯಾವಾಗಿದ್ದೀರಿ?
ಭೀಮಾ ನದಿಯ ಪ್ರವಾಹಕ್ಕೆ ಉತ್ತರ ಕರ್ನಾಟಕದ ಕಲಬುರಗಿ, ವಿಜಯಪುರ, ಬೀದರ್, ಕೊಪ್ಪಳ ಸೇರಿದಂತೆ ಹಲವು ಜಿಲ್ಲೆಗಳು ಸಂಪೂರ್ಣ ಮುಳುಗಡೆಯಾಗಿದ್ದು, ಜನ ನರಕಯಾತನೆ ಅನುಭವಿಸುತ್ತಿದ್ದಾರೆ. ಹಲವು ಜಿಲ್ಲೆಯಲ್ಲಿ ಸಾವು ನೋವುಗಳಾಗಿವೆ. ನೆರೆಯಿಂದ ಗ್ರಾಮಗಳಿಗೆ ಗ್ರಾಮಗಳೇ ಮುಳುಗಡೆ ಆಗಿವೆ. ರಸ್ತೆ, ಸೇತುವೆಗಳು ಮುಳುಗಿವೆ. ಕುಡಿಯುವ ನೀರು, ವಿದ್ಯುತ್ ಸಂಪರ್ಕ ವ್ಯತ್ಯಯವಾಗಿದೆ ಎಂದು ಜೆಡಿಎಸ್ ಕಳವಳ ವ್ಯಕ್ತಪಡಿಸಿದೆ.
ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗಿದೆ. ಉಸ್ತುವಾರಿ ಮಂತ್ರಿಗಳ ಪತ್ತೆಯೇ ಇಲ್ಲ. ನಿಮ್ಮ ಜಿಲ್ಲೆಗಳು ಸಂಪೂರ್ಣ ಮುಳುಗಿರುವಾಗ ಎಲ್ಲಿ ಓಡಿ ಹೋಗಿದ್ದೀರಿ? ಜನರ ದುಃಖ, ಆರ್ತನಾದ ನಿಮಗೆ ಕೇಳುತ್ತಿಲ್ಲವೇ? ನೆರೆ ಸಂತ್ರಸ್ತರಿಗೆ ಆಶ್ರಯ ಕೇಂದ್ರಗಳನ್ನು ನಿರ್ಮಿಸಿ ಅಗತ್ಯ ಸೌಲಭ್ಯ ಕಲ್ಪಿಸಿ, ನೆರೆ ಹಾನಿಯಿಂದ ನಷ್ಟಕ್ಕೊಳಗಾದವರಿಗೆ ತ್ವರಿತವಾಗಿ ಪರಿಹಾರ ನೀಡಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಪಕ್ಷ ಒತ್ತಾಯ ಮಾಡಿದೆ.





