ಚಿಕ್ಕಮಗಳೂರು: ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಸಾಮೂಹಿಕ ಗಣಪತಿ ವಿಸರ್ಜನೆ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿ ಎಫ್‌ಐಆರ್ ದಾಖಲಾಗಿರುವ ಕುರಿತು ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಚಿಕ್ಕಮಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಎಂಎಲ್‌ಸಿ ಸಿ.ಟಿರವಿ ಅವರು, ಕೇಸ್ ನನಗೆ ಹೊಸದಲ್ಲ. ಕೇಸಿಗೆ ಹೆದರುವ ಜಾಯಮಾನದವನೂ ನಾನಲ್ಲ. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎಂದು ಹೇಳಿದ್ದೆ. ಪ್ರೀತಿಗೆ ಪ್ರೀತಿ ಕಲ್ಲಿಗೆ-ಕಲ್ಲು ಎಂದು ಹೇಳಿದ್ದೆ. ನನ್ನ ಹೇಳಿಕೆಗೆ ಇಂದಿಗೂ ನಾನು ಬದ್ಧ ಎಂದರು.
ಇದನ್ನು ಓದಿ: ಮದ್ದೂರಿನಲ್ಲಿ ಪ್ರಚೋದನಕಾರಿ ಭಾಷಣ: ಎಂಎಲ್‌ಸಿ ಸಿ.ಟಿ.ರವಿ ವಿರುದ್ಧ ಎಫ್‌ಐಆರ್
ಇನ್ನು ಇಂತಹ ನೂರು ಕೇಸ್ ಬಂದರೂ ನಾನು ನಿಭಾಯಿಸುತ್ತೇನೆ. ನಾನೇನು ಇದಕ್ಕೆ ಹೆದರಿ ಕೂರಲ್ಲ ಎಂದು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಪ್ರಕರಣದ ಹಿನ್ನೆಲೆ: ಮದ್ದೂರಿನಲ್ಲಿ ನಿನ್ನೆ ಸಾಮೂಹಿಕ ಗಣಪತಿ ವಿಸರ್ಜನೆ ವೇಳೆ ಎಂಎಲ್‌ಸಿ ಸಿ.ಟಿ.ರವಿ ಅವರು ಪ್ರಚೋದನಕಾರಿ ಭಾಷಣ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ಅವರ ದೂರಿನನ್ವಯ ಸಿ.ಟಿ.ರವಿ ವಿರುದ್ಧ ಪ್ರಕರಣ ದಾಖಲಾಗಿದೆ.





