ಬೆಂಗಳೂರು: ಕಾರು ಓವರ್ ಟೇಕ್ ಮಾಡಿದ್ದಕ್ಕೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಸೇರಿದಂತೆ ಮೂವರ ವಿರುದ್ಧ ದಾಬಸ್‌ಪೇಟೆಯಲ್ಲಿ ಪ್ರಕರಣ ದಾಖಲಾಗಿದೆ.
ಓವರ್ ಟೇಕ್ ಮಾಡುವ ವಿಚಾರವಾಗಿ ನೆಲಮಂಗಲದ ಹಳೇ ನಿಜಗಲ್ ಬಳಿ ಕಾರು ಅಡ್ಡಗಟ್ಟಿ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಸಲ್ಮಾನ್, ಸೈಫ್, ಇಲಿಯಾಜ್, ಗುಲಷಿರ್ ಉನ್ನೀಸಾ ಎಂಬುವವರು ದೂರು ದಾಖಲಿಸಿದ್ದಾರೆ. ಈ ಬೆನ್ನಲ್ಲೇ ಹೆಗಡೆ ಕಾರಿನಲ್ಲಿದ್ದ ನಾಲ್ವರನ್ನೂ ನೆಲಮಂಗಲ ಡಿವೈಎಸ್‌ಪಿ ಕಚೇರಿಯಲ್ಲಿ ವಿಚಾರಣೆ ನಡೆಸಲಾಗಿದೆ.
ಅನಂತ್ ಕುಮಾರ್ ಹೆಗಡೆ ಅವರಿಗೆ ಬೆದರಿಕೆ ಇರುವ ಕಾರಣ ಗನ್ ತೆಗೆದಿರೋದಾಗಿ ಗನ್‌ಮ್ಯಾನ್ ಶ್ರೀಧರ್ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ದಾಬಸ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾಜಿ ಸಂಸದರು ಪ್ರಕರಣದಲ್ಲಿ ಭಾಗಿಯಾಗಿದ್ದ ಸುದ್ದಿ ಹರಡುತ್ತಿದ್ದಂತೆ ಪೊಲೀಸ್ ಠಾಣೆಯಲ್ಲಿ ಜನಸಮೂಹ ಜಮಾಯಿಸಿತ್ತು.
ಈ ಬಗ್ಗೆ ಮಾಹಿತಿ ನೀಡಿರುವ ಬೆಂಗಳೂರು ಗ್ರಾಮಾಂತರ ಎಸ್‌ಪಿ ಸಿ.ಕೆ.ಬಾಬಾ ಅವರು, ಅನಂತ್ ಕುಮಾರ್ ಹೆಗಡೆ ಸೇರಿದಂತೆ ಮೂವರ ಮೇಲೆ ಎಫ್‌ಐಆರ್ ದಾಖಲಾಗಿದೆ. ಎ.1 ಅನಂತ್ ಕುಮಾರ್, ಎ2 ಗನ್ ಮ್ಯಾನ್, ಎ3 ಚಾಲಕ ಆರೋಪಿಗಳಾಗಿದ್ದಾರೆ. ತನಿಖೆ ಮಾಡಿ ಅಗತ್ಯವಿದ್ದರೆ ಬಂಧಿಸುತ್ತೇವೆ. ಇದರೊಂದಿಗೆ ಗಾಯಾಳುಗಳ ಹೇಳಿಕೆ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.





