ಬೆಂಗಳೂರು: ತಮ್ಮ ತಂದೆ ಜಿ.ಟಿ.ದೇವೇಗೌಡ ಅವರ ಹಾಗೂ ಪಕ್ಷದ ನಡುವಿನ ಮುನಿಸು ವಿಚಾರದ ಬಗ್ಗೆ ಶಾಸಕ ಜಿ.ಡಿ.ಹರೀಶ್ ಗೌಡ ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಇಂದು(ನ.27) ಶಾಸಕ ಜಿ.ಟಿ.ದೇವೇಗೌಡರು ಜೆಡಿಎಸ್ ಪಕ್ಷದಿಂದ ಇತ್ತೀಚಿನ ದಿನಗಳಲ್ಲಿ ಅಂತರ ಕಾಯ್ದುಕೊಂಡಿದ್ದರ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಪಕ್ಷಗಳಲ್ಲಿ ಸಹಜವಾಗಿ ಅಸಮಾಧಾನಗಳು ಇರುವಂತೆ ನಮ್ಮ ಪಕ್ಷದಲ್ಲಿಯೂ ಇದೆ. ಹಾಗೆಯೇ ನಮ್ಮ ಪಕ್ಷದಲ್ಲಿಯೂ ನಾಯಕರ ಹಾಗೂ ಪಕ್ಷದ ವರಿಷ್ಠರ ನಡುವೆ ಅಸಮಾಧಾನ ಸರ್ವೇ ಸಾಮಾನ್ಯವಾಗಿದೆ. ಅದನ್ನು ಮುಂಬರುವ ದಿನಗಳನ್ನು ಸರಿಪಡಿಸಲಾಗುತ್ತದೆ ಎಂದು ಹೇಳಿದ್ದಾರೆ.
ನಮ್ಮ ವರಿಷ್ಠರು ಪಕ್ಷದ ಎಲ್ಲಾ ಶಾಸಕರು ಹಾಗೂ ನಾಯಕರೊಂದಿಗೆ ಸಾಧಕ-ಬಾಧಕಗಳೆಲ್ಲಾವನ್ನು ಚರ್ಚಿಸಿ, ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡಲಾಗುತ್ತದೆ. ಇದರ ಬಗ್ಗೆ ನಾನು ಏನು ಹೆಚ್ಚಿನ ರೀತಿಯಲ್ಲಿ ಹೇಳಲು ಹೋಗುವುದಿಲ್ಲ. ಮುಂದಿನ ದಿನಗಳಲ್ಲಿ ಎಲ್ಲಾ ನಾಯಕರ ಅಸಮಾಧಾನ ಕಳೆದು ಮೊದಲಿನಂತೆ ಪಕ್ಷ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.
ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡರು ದಸರಾ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದರು. ಇದು ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾದ ನಂತರ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆಂಬ ಸಂಶಯ ವ್ಯಕ್ತವಾಗಿತ್ತು. ಈ ವಿಚಾರಕ್ಕೆ ಪೂರಕವಾಗುವಂತೆ ಉಪಚುನಾವಣೆಯ ವೇಳೆ ಎನ್‌ಡಿಎ ಅಭ್ಯರ್ಥಿ ನಿಖಿಲ್ ಪರ ಪ್ರಚಾರ ಮಾಡಬೇಕಿದ್ದ ಸ್ಟಾರ್ ಪ್ರಚಾರದ ಪಟ್ಟಿಯಲ್ಲಿ ಅವರ ಹೆಸರನ್ನು ಬಿಡಲಾಗಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಅವರು ಸಂಪೂರ್ಣವಾಗಿ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ.