ಬೆಂಗಳೂರು: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಿಂಪಡೆದಿದ್ದ 3 ಕೃಷಿ ಕಾಯ್ದೆಗಳ ಅನ್ವಯವೇ ರೈತರ ಆದಾಯ ಹೆಚ್ಚಿಸಲು ಶಿಫಾರಸು ನೀಡಿ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ಸೂಚಿಸಿದೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ʼಎಕ್ಸ್ʼ ನಲ್ಲಿ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್. ಅಶೋಕ್, ತನ್ನ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಸರ್ಕಾರ ರೈತರ ಹಿತಾಶಕ್ತಿಯನ್ನು ಬಲಿಕೊಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಹಿಂದಿನ ಅವಧಿಯಲ್ಲಿ ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳ ತಿದ್ದುಪಡಿಗೆ ಮುಂದಾಗಿತ್ತು. ಅದನ್ನು ವಿರೋಧಿಸಿ ದೇಶಾದಾದ್ಯಂತ ಕಾಂಗ್ರೆಸ್ ಪಕ್ಷ ಪ್ರತಿಭಟನೆ ನಡೆಸಿತ್ತು. ಈಗ ಅದೇ ಪಕ್ಷ ಮೂರು ಕೃಷಿ ಕಾಯ್ದೆಗಳ ಅನ್ವಯ ರೈತರ ಅದಾಯ ಹೆಚ್ಚಿಸಲು ಶಿಫಾರಸು ನೀಡಿ ಎಂದು ಕೃಷಿ ಬೆಲೆ ಆಯೋಗಕ್ಕೆ ಸೂಚನೆ ನೀಡಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ.
ಕೃಷಿ ಬೆಲೆ ಆಯೋಗಕ್ಕೆ ನೇಮಕ ಮಾಡಲಾದ ಅಧ್ಯಕ್ಷ ಮತ್ತ ಸದಸ್ಯರಿಗೆ ಷರತ್ತು-ನಿಬಂಧನೆ ಮತ್ತು ಕರ್ತವ್ಯಗಳನ್ನು ನಿಗದಿ ಮಾಡಿ 2024 ಡಿಸೆಂಬರ್ 24 ರಂದು ರಾಜ್ಯ ಕೃಷಿ ಇಲಾಖೆ ಹೊರಡಿಸಿದ ಆದೇಶದಲ್ಲಿ ಈ ಉಲ್ಲೇಖವಿದೆ.
ಕೇಂದ್ರ ಸರ್ಕಾರದ ಮೂರು ಕಾಯ್ದೆಗಳಯ ಮತ್ತ ಅದರ ಆಧಾರದಲ್ಲಿ 2020ರ ರಾಜ್ಯ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಆಧಾರವಾಗಿರಿಸಿಕೊಳ್ಳುವಂತೆ ರಾಜ್ಯ ಸರ್ಕಾರ ತಿಳಿಸಿದೆ.