ಬೆಂಗಳೂರು: ರಾಜಕೀಯ ಪಿತೂರಿ ನಡೆಸಿ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷವನ್ನು ಕೆಳಗಿಳಿಸುವ ದುರುದ್ದೇಶದಿಂದ ಸಿಎಂ ಪತ್ನಿ ಪಾರ್ವತಿ, ಸಚಿವ ಭೈರತಿ ಸುರೇಶ್ ಅವರಿಗೆ ಇಡಿ ನೋಟಿಸ್ ನೀಡಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದು ಪ್ರಕರಣವನ್ನು ಒಂದೇ ಸಮಯದಲ್ಲಿ ಎರಡು ಸಂಸ್ಥೆಗಳು ತನಿಖೆ ನಡೆಸಲು ಸಾಧ್ಯವಿಲ್ಲ. ಲೋಕಾಯುಕ್ತ ತನಿಖೆ ನಡೆಸುತ್ತಿರುವಾಗ ಬೇರೆ ಸಂಸ್ಥೆಗಳು ತನಿಖೆ ನಡೆಸಲು ಆಗುವುದಿಲ್ಲ ಎಂದು ಕೋರ್ಟ್ ಅನೇಕ ಬಾರಿ ತೀರ್ಪು ನೀಡಿವೆ. ಆದರೂ ರಾಜಕೀಯ ದುರುದ್ದೇಶದಿಂದ ಈ ರೀತಿ ಆಗುತ್ತಿದೆ. ನನ್ನ ವಿರುದ್ಧದ ಪ್ರಕರಣದಲ್ಲೂ ಇದೇ ರೀತಿ ಆಗಿತ್ತು ಎಂದು ತಿಳಿಸಿದರು.
ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂಬ ವಿಚಾರವಾಗಿ ಪ್ರಶ್ನೆ ಬಂದಾಗ, ನನ್ನ ಪ್ರಕರಣದಲ್ಲೂ ಸಿಬಿಐ ಹಾಗೂ ಇಡಿ ಒಟ್ಟಿಗೆ ತನಿಖೆ ನಡೆಸಿದ್ದವು. ಎರಡು ಸಂಸ್ಥೆಗಳು ಒಟ್ಟಿಗೆ ಒಂದೇ ಪ್ರಕರಣವನ್ನು ತನಿಖೆ ನಡೆಸುವಂತಿಲ್ಲ. ಈ ವಿಚಾರವಾಗಿ ನನ್ನ ಪ್ರಕರಣದ ತೀರ್ಪುಗಳನ್ನು ನ್ಯಾಯಾಲಯದ ಮುಂದೆ ಪ್ರಸ್ತಾಪ ಮಾಡಿದ್ದೇನೆ ಎಂದು ಹೇಳಿದರು.
ಸಿಎಂ ಹುದ್ದೆ ವಿಚಾರವಾಗಿ ವಿವಾದಗಳ ಬಗ್ಗೆ ಪ್ರತಿಕ್ರಿಯಿಸಿ, ಸರ್ಕಾರ ಸುಭದ್ರವಾಗಿದೆ. ನಾವೆಲ್ಲರೂ ಸಿಎಂ ಅವರ ಕೆಳಗೆ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.