Mysore
27
few clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಬೀದಿಬದಿ, ಹೋಟೆಲ್ ಆಹಾರದ ಮೇಲೆ ಕಟ್ಟುನಿಟ್ಟಿನ ನಿಗಾ ಅಗತ್ಯ: ಡಾ. ಶರಣ್‌ ಪ್ರಕಾಶ್‌ ಪಾಟೀಲ್

ಬೆಂಗಳೂರು : ಆಹಾರದ ಗುಣಮಟ್ಟದ ಮೇಲೆ ಕಠಿಣ ನಿಯಂತ್ರಣ ಅಗತ್ಯವಿದೆ. ಬೀದಿಬದಿ ಮತ್ತು ಹೋಟೆಲ್ ಆಹಾರದ ಗುಣಮಟ್ಟವನ್ನು ರಾಜ್ಯ ಮತ್ತು ಕೇಂದ್ರ ಆಹಾರ ಮತ್ತು ಔಷಧ ಅಧಿಕಾರಿಗಳು ನಿರಂತರವಾಗಿ ಪರಿಶೀಲಿಸಬೇಕು. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಇದು ಅತ್ಯಗತ್ಯ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್‌ ತಿಳಿಸಿದರು.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ನಿಮ್ಹಾನ್ಸ್‌ನಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಆಹಾರ ಸುರಕ್ಷತಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು.

ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಮತ್ತು ಇಲಾಖೆಯ ಕಾರ್ಯದರ್ಶಿ ಪುಣ್ಯ ಸಲೀಲಾ ಶ್ರೀವಾಸ್ತವ ಅವರ ಸಮ್ಮುಖದಲ್ಲಿ ಭಾಷಣ ಮಾಡಿದ ಸಚಿವ ಡಾ. ಪಾಟೀಲ್‌, ಅನೈರ್ಮಲ್ಯ ಮತ್ತು ಕಲಬೆರಕೆ ಆಹಾರದಿಂದ ಉಂಟಾಗುವ ಗಂಭೀರ ಆರೋಗ್ಯ ಅಪಾಯಗಳನ್ನು ತಡೆಗಟ್ಟಬೇಕಾಗಿದೆ ಎಂದರು.

“ಸಾರ್ವಜನಿಕ ಸ್ಥಳಗಳಲ್ಲಿ ಮಾರಾಟವಾಗುವ ಕಡಿಮೆ ಗುಣಮಟ್ಟದ ಆಹಾರದಿಂದ ಮಕ್ಕಳು ಮತ್ತು ವೃದ್ಧರ ಮೇಲೆ ಹೆಚ್ಚಾಗಿ ಪರಿಣಾಮ ಬೀರುತ್ತಿದೆ. ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರಿ ಸಂಸ್ಥೆಗಳಿಂದ ಕಟ್ಟುನಿಟ್ಟಿನ ಜಾರಿ ಅತ್ಯಗತ್ಯ” ಎಂದು ಅವರು ಕರೆ ನೀಡಿದರು.

ಮಾರಾಟಗಾರರು ಆಹಾರದ ರುಚಿ ಮತ್ತು ಅದನ್ನು ಚೆಂದಗಾಣಿಸಲು ಆಗಾಗ್ಗೆ ನಿಷೇಧಿತ ಬಣ್ಣಗಳು ಮತ್ತು ರಾಸಾಯನಿಕಗಳನ್ನು ಬಳಸುತ್ತಾರೆ, ಇದು ಆರೋಗ್ಯ ತೊಡಕುಗಳಿಗೆ ಕಾರಣವಾಗುತ್ತದೆ.ಕೆಲವೊಮ್ಮೆ ಮಾರಕವೂ ಆಗಿರಬಹುದು. ಬೀದಿ ಆಹಾರಕ್ಕಿಂತ ಮನೆಯಲ್ಲಿ ತಯಾರಿಸಿದ ಊಟವನ್ನು ಆಯ್ಕೆ ಮಾಡಿಕೊಳ್ಳಬೇಕು. ಯುವಕರು ಮತ್ತು ಮಕ್ಕಳು ಇದನ್ನು ಅಭ್ಯಾಸ ಮಾಡಿಕೊಳ್ಳಬೇಕು. ನಮ್ಮ ಪೂರ್ವಜರು ಆರೋಗ್ಯಕರ ಆಹಾರ ಪದ್ಧತಿಗಳನ್ನು ಕಲಿಸಿದ್ದಾರೆ. ನಾವು ಆ ಪದ್ಧತಿಗಳಿಗೆ ಮರಳುವ ಸಮಯ ಇದು. ಸರಿಯಾಗಿ ತಿನ್ನುವುದು ಪ್ರಗತಿಪರ ರಾಷ್ಟ್ರದ ಸಂಕೇತ” ಎಂದು ಸ್ವತಃ ವೈದ್ಯರಾಗಿರುವ ಡಾ. ಪಾಟೀಲ್ ತಿಳಿಸಿದ್ದಾರೆ.

ಶಾಲಾ ಮಕ್ಕಳು ಮತ್ತು ಸಮುದಾಯಗಳಲ್ಲಿ ಆಹಾರ ಸುರಕ್ಷತೆ, ನೈರ್ಮಲ್ಯ ಮತ್ತು ಪೋಷಣೆಯ ಕುರಿತು ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿರುವ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಹೊರತಂದಿರುವ ‘ಈಟ್‌ ರೈಟ್‌ ಆಕ್ಟಿವಿಟಿ ಬುಕ್‌ʼ ಅನ್ನು ಸಚಿವರು ಬಿಡುಗಡೆ ಮಾಡಿದರು.

ಆರೋಗ್ಯಕರ ಆಹಾರ ಪದ್ಧತಿಗಳ ಕುರಿತು ತರಬೇತಿ, ಪರೀಕ್ಷೆ ಮತ್ತು ಸಾರ್ವಜನಿಕ ಜಾಗೃತಿ ಮೂಡಿಸುವ ‘ಫುಡ್‌ ಸೇಫ್ಟಿ ಆನ್ ವೀಲ್ಸ್’ ಮೊಬೈಲ್ ಘಟಕವನ್ನು ಉದ್ಘಾಟಿಸಿದರು.

ಕೇಂದ್ರ ಸಚಿವ ಜೆ.ಪಿ. ನಡ್ಡಾ ಅಧ್ಯಕ್ಷತೆಯಲ್ಲಿ ನಡೆದ ನಿಮ್ಹಾನ್ಸ್‌ನ ಸಂಸ್ಥೆ ಮತ್ತು ಆಡಳಿತ ಮಂಡಳಿ ಪದಾಧಿಕಾರಿಗಳ ಸಭೆಗಳೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ಸಂಸದರಾದ ಪಿ.ಸಿ. ಮೋಹನ್ ಮತ್ತು ಲೆಹರ್ ಸಿಂಗ್ ಮತ್ತು ನಿಮ್ಹಾನ್ಸ್ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಉಪಸ್ಥಿತರಿದ್ದರು.

Tags:
error: Content is protected !!