ಬೆಂಗಳೂರು: ಕನ್ನಡ ಚಿತ್ರರಂಗದ ನಿರ್ದೇಶಕ ಎಸ್.ನಾರಾಯಣ್ ಹಾಗೂ ಅವರ ಕುಟುಂಬದ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸೊಸೆಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪದ ಮೇರೆಗೆ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಎಸ್.ನಾರಾಯಣ್ ಸೊಸೆ ಪವಿತ್ರ ಗಂಭೀರ ಆರೋಪ ಮಾಡಿದ್ದಾರೆ. ಕಳೆದ 2021ರಲ್ಲಿ ಎಸ್.ನಾರಾಯಣ್ ಪುತ್ರ ಪವನ್ ಹಾಗೂ ಪವಿತ್ರ ಮದುವೆ ಆಗಿದ್ದರು.
ನನ್ನ ಮದುವೆ ಅವಧಿಯಲ್ಲಿ 1 ಲಕ್ಷದ ಉಂಗುರ ಹಾಗೂ ಖರ್ಚು ವೆಚ್ಚದ ಹಣ ಪಡೆದಿದ್ದಾರೆ. ನನ್ನ ಪತಿ ಪವನ್ ಓದಿರಲಿಲ್ಲ. ಎಲ್ಲಿಯೂ ಕೂಡ ಕೆಲಸ ಸಿಕ್ಕಿರಲಿಲ್ಲ. ನಾನೇ ಎಲ್ಲಾ ಕೆಲಸ ಮಾಡಿ ಮನೆಯ ಸಂಸಾರ ಸಾಗಿಸುತ್ತಿದ್ದೆ. ಇದರ ನಡುವೆ ಫಿಲ್ಮ್ ಇನ್ಸ್‌ಸ್ಟಿಟ್ಯೂಟ್ ಕೂಡ ಆರಂಭಿಸಲಾಗಿತ್ತು. ಇದನ್ನು ಶುರು ಮಾಡಲು ಪವನ್ ನಮ್ಮ ಬಳಿ ಹಣ ಕೇಳಿದ್ದರು. ಆಗ ನಾವು ಒಡವೆಗಳನ್ನು ಅಟ ಇಟ್ಟು ಹಣ ಕೊಟ್ಟಿದ್ದೆವು. ನಂತರ ಸಂಸ್ಥೆ ನಷ್ಟದಲ್ಲಿ ಮುಳುಗಿತು. ಆಗ ನಾವು 10 ಲಕ್ಷ ರೂ ಹಣವನ್ನು ಪವನ್‌ಗೆ ನೀಡಿದ್ದೆವು. ಇದಾದ ನಂತರವೂ ಪವನ್ ಹಾಗೂ ಅವರ ತಂದೆ, ತಾಯಿ ನನಗೆ ವರದಕ್ಷಿಣೆ ತರುವಂತೆ ಕಿರುಕುಳ ನೀಡಿದ್ದರು ಎಂದು ಪವಿತ್ರ ಗಂಭೀರ ಆರೋಪ ಮಾಡಿದ್ದಾರೆ.
ವರದಕ್ಷಿಣೆ ತರುವಂತೆ ನನ್ನನ್ನು ಮನೆಯಿಂದ ಹೊರಹಾಕಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಆರೋಪ ಪ್ರಕರಣದಲ್ಲಿ ಪವನ್ ಮೊದಲ ಆರೋಪಿಯಾಗಿದ್ದು, ಎಸ್.ನಾರಾಯಣ್ ಎರಡನೇ ಆರೋಪಿ ಆಗಿದ್ದಾರೆ.





