ಮಂಡ್ಯ: ರಾಜ್ಯದಲ್ಲಿಯೇ ನೀರಿಗೆ ಹಾಹಾಕಾರವಾಗಿದೆ. ಈಗಿರುವಾಗ ತಮಿಳುನಾಡಿಗೆ ನೀರು ಬಡುವ ಪ್ರಶ್ನೆಯೇ ಇಲ್ಲ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮಂಡ್ಯದ ವಿವಿ ಆವರಣದಲ್ಲಿ ಆಯೋಜಿಸಲಾಗಿದ್ದ ಗ್ಯಾರೆಂಟಿ ಯೋಜನೆಗಳ ಬೃಹತ್ ಸಮಾವೇಶದ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬರಗಾಲ ಆವರಿಸಿದ್ದು, ನಮ್ಮ ಜನರಿಗೆ ನೀರು ಕೊಡುವುದ ಕಷ್ಟವಾಗಿದೆ. ಆದರೆ ಈ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಇಲ್ಲದ ಹೇಳಿಕೆಗಳನ್ನು ನೀಡುವ ಮೂಲಕ ಜನರ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ನೀರು ಬಿಡುವ ಪ್ರಶ್ನೆಯೇ ಇಲ್ಲ ಎಂದು ಡಿಕೆ ಹೇಳಿದರು.
ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಲಾಗಿದೆ. ಮೇಕೆದಾಟು ಯೋಜನೆಗೆ ಬಿಜೆಪಿ ನಾಯಕರು ಮತ್ತು ಎಚ್.ಡಿ. ದೇವೇಗೌಡರು ಅನುಮತಿ ಪಡೆದು ಕಾವೇರಿ ವಿಚಾರವಾಗಿ ಮಾತನಾಡಲಿ ಎಂದರು.
ಬೆಂಗಳೂರಿನ ಕೊರತೆ ನೀಗಿಸಲು ಕೆಆರ್ಎಸ್ ಅಣೆಕಟ್ಟೆಯಿಂದ ನೀರು ಬಿಡಲಾಗುತ್ತಿದೆ. ತಮಿಳುನಾಡು ಸರ್ಕಾರದ ಒತ್ತಡಕ್ಕೆ ನಾವು ಎಂದಿಗೂ ಮಣಿಯಲಿಲ್ಲ. ರೈತರ ಹಿತದೃಷ್ಟಿಯಿಂದ ಕಾನೂನು ಹೋರಾಟ ಮುಂದುವರಿಸುತ್ತೇವೆ. ಮೇಕೆದಾಟು ಬಳಿ 66 ಟಿಎಂಸಿ ಅಡಿ ಬ್ಯಾಲೆನ್ಸಿಂಗ್ ಜಲಾಶಯ ನಿರ್ಮಿಸಲು ಬಿಜೆಪಿ ಅನುಮತಿ ನೀಡಿದರೆ, ತಮಿಳುನಾಡಿಗೆ ಬೇಡಿಕೆ ಬಂದಾಗಲೆಲ್ಲಾ ನೀರು ಬಿಡಲು ಸಾಧ್ಯವಾಗುತ್ತದೆ. ಆ ಮೂಲಕ ನೀರಿನ ಸಮಸ್ಯೆ ತಗ್ಗಲಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು.