ಬೆಂಗಳೂರು : ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾರೆ. ನಾಯಕತ್ವ ಬದಲಾವಣೆಯ ಚರ್ಚೆಗಳು ಅನಗತ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಆ ಮೂಲಕ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲರೂ ತಮ್ಮದೇ ಆದಂತಹ ಕೊಡುಗೆ ನೀಡಿದ್ದಾರೆ. ಸದ್ಯಕ್ಕೆ ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧ ಎಂದು ಸಿದ್ದರಾಮಯ್ಯ, ಶಿವಕುಮಾರ್ ಹೇಳಿರುವುದರಿಂದ ಈ ರೀತಿ ಚರ್ಚೆಗಳು ಅಪ್ರಸ್ತುತ. ತಮಗೆ ಸಚಿವ ಸ್ಥಾನದ ಮೇಲೆ ವ್ಯಾಮೋಹ ಇಲ್ಲ. ರಾಜೀನಾಮೆ ಕೊಟ್ಟು ಪಕ್ಷದ ಸಂಘಟನೆ ಮಾಡಿ ಎಂದರೆ ಅದಕ್ಕೂ ನಾನು ಸಿದ್ಧ ಎಂದರು.
ಇದನ್ನು ಓದಿ:ಸಿಎಂ ಬದಲಾವಣೆ ವಿಚಾರ: ಹೈಕಮಾಂಡ್ ಹೇಳಿಕೆಯೇ ಅಂತಿಮ ಎಂದ ಸಿಎಂ ಸಿದ್ದರಾಮಯ್ಯ
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವ ಮೈತ್ರಿಕೂಟಕ್ಕೆ ಗೆಲುವಾಗುವ ವಿಶ್ವಾಸವಿದೆ. ನಾವು ಪ್ರಬಲ ಪೈಪೋಟಿ ನೀಡಿದ್ದೇವೆ. ಬಿಹಾರ ಸರ್ಕಾರ, ಚುನಾವಣೆಗೂ ಮೊದಲೇ ಸರ್ಕಾರದ ಹಣವನ್ನು ಮಹಿಳೆಯರ ಖಾತೆಗೆ ತಲಾ ೧೦ ಸಾವಿರ ರೂ.ಗಳಂತೆ ಹಂಚಿದೆ. ಇದು ಮೋದಿ ನೇತೃತ್ವದಲ್ಲಿ ನಡೆದ ಕಾನೂನುಬದ್ಧ ಭ್ರಷ್ಟಚಾರ ಎಂದು ವಾಗ್ದಾಳಿ ನಡೆಸಿದರು.
ಆರ್‌ಎಸ್‌ಎಸ್ ನಿಷೇಧಿಸಬೇಕೆಂದು ಮಲ್ಲಿಕಾರ್ಜುನ್ ಖರ್ಗೆ ಹೇಳಿರುವುದಕ್ಕೆ ತಾವು ಪ್ರತಿಕ್ರಿಯಿಸುವುದಿಲ್ಲ. ಆರ್‌ಎಸ್‌ಎಸ್ ನಿಷೇಧವಾಗಬೇಕು ಎಂದು ಹೇಳುವುದಿಲ್ಲ. ಈ ದೇಶದಲ್ಲಿ ಪ್ರತಿಯೊಂದು ಸಂಘಟನೆಗೂ ತಮ್ಮ ಚಟುವಟಿಕೆಗಳನ್ನು ನಡೆಸಲು ಅವಕಾಶ ಇದೆ. ಸಂಘ ಪರಿವಾರ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯಾನಂತರ ಚಟುವಟಿಕೆಗಳನ್ನು ನಡೆಸಿರುವ ಇತಿಹಾಸ ಹೊಂದಿದೆ. ಆದರೆ ಯಾವತ್ತೂ ಸಂಘಪರಿವಾರ ಸಮಾಜದ ಒಗ್ಗೂಡುವಿಕೆಗೆ ಪ್ರಯತ್ನಿಸಿಲ್ಲ ಎಂದರು.





