ಬೆಂಗಳೂರು: ಐತಿಹಾಸಿಕ ಕಾವೇರಿ ಆರತಿ ಕಾರ್ಯಕ್ರಮದ ಮಹತ್ವ ಹಾಗೂ ಅದರಿಂದಾಗುವ ಆರ್ಥಿಕ ಅಭಿವೃದ್ಧಿ ಕುರಿತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಂದು ಮಂಡ್ಯ ರೈತ ಮುಖಂಡರ ಜೊತೆ ಸಮಾಲೋಚನೆ ನಡೆಸಿದರು.
ರೈತರ ಜೀವನಾಡಿ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಮಾಡಲು ನಿರ್ಧಾರ ಮಾಡಿರುವ ರಾಜ್ಯ ಸರ್ಕಾರದ ನಡೆಗೆ ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ, ಯಾವುದೇ ಕಾರಣಕ್ಕೂ ಕಾವೇರಿ ಆರತಿ ಮಾಡಲು ಬಿಡಲ್ಲ ಎಂದು ಪಟ್ಟು ಹಿಡಿದಿದ್ದರು.
ಈ ಹಿನ್ನೆಲೆಯಲ್ಲಿ ಇಂದು ಮಂಡ್ಯ ಜಿಲ್ಲೆಯ ರೈತ ಮುಖಂಡರು, ಇತರೆ ಸಂಘಟನೆ ಮುಖಂಡರು ಹಾಗೂ ಜನಪ್ರತಿನಿಧಿಗಳ ಜೊತೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಐತಿಹಾಸಿಕ ಕಾವೇರಿ ಆರತಿ ಕಾರ್ಯಕ್ರಮದ ಮಹತ್ವ, ಅದರಿಂದಾಗುವ ಧಾರ್ಮಿಕ, ಸಾಂಸ್ಕೃತಿಕ, ಕಲೆ, ಪ್ರವಾಸೋದ್ಯಮ, ಆರ್ಥಿಕ ಅಭಿವೃದ್ಧಿ ಕುರಿತು ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಸಚಿವ ಶಿವರಾಜ್ ತಂಗಡಗಿ, ಶಾಸಕ ರಮೇಶ್ ಬಂಡಿಸಿದ್ದೇಗೌಡ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಕಾವೇರಿ ಆರತಿ ಕಾರ್ಯಕ್ರಮ ರೂಪುರೇಷೆ ಸಮಿತಿ ಹಾಗೂ ಬಿಡಬ್ಲ್ಯೂಎಸ್ಎಸ್ ಬಿ ಅಧ್ಯಕ್ಷ ಡಾ ರಾಮ್ ಪ್ರಸಾದ್ ಮನೋಹರ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ರೈತ ಸಂಘಟನೆಗಳು ಹಾಗೂ ನಾನಾ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.





