ಬೆಂಗಳೂರು: ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಎಸ್‌ಎಲ್ ವರದಿ ಬರುವ ತನಕ ಎಸ್‌ಐಟಿ ತನಿಖೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.
ಈ ಕುರಿತು ಅಧಿವೇಶನದಲ್ಲಿ ಮಾತನಾಡಿದ ಅವರು, ದೂರುದಾರ ನನಗೆ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾನೆ. ಕೊಲೆಯಾದ ಅನೇಕ ಯುವತಿ, ಮಹಿಳೆ ಹಾಗೂ ಪುರುಷರ ಶವಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿದ್ದಾನೆ. ಈ ಬಗ್ಗೆ ರಾಜ್ಯದ ಮಹಿಳೆ ಆಯೋಗದ ಅಧ್ಯಕ್ಷರು ಸಿಎಂ ಸಿದ್ದರಾಮಯ್ಯರಿಗೆ ಪತ್ರ ಬರೆಯುತ್ತಾರೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಎಸ್‌ಐಟಿಗೆ ವಹಿಸಲಾಗಿತ್ತು. ಎಸ್‌ಐಟಿ ಪ್ರಣಬ್ ಮೊಹಂತಿ ಅವರ ನೇತೃತ್ವದಲ್ಲಿ ಅನುಚೇತ್ ಅವರು ಸೇರಿ ತನಿಖೆ ನಡೆಸಿದ್ದಾರೆ. ಸಾಕ್ಷಿದಾರನಿಂದ 161 ಸ್ಟೇಟ್‌ಮೆಂಟ್ ತೆಗೆದುಕೊಂಡು, ಸ್ಥಳಗಳ ಮ್ಯಾಪ್ ಮಾಡಿಕೊಂಡು ಭೂ ಅಗೆತ ಪ್ರಾರಂಭಿಸಿದ್ದಾರೆ. ಭೂಮಿ ಅಗೆಯುವ ಸ್ಥಳ ಪ್ರಾರಂಭ ಮಾಡಿದಾಗ ಎರಡು ಸ್ಥಳಗಳಲ್ಲಿ ಅಸ್ಥಿ ಪಂಜರ ಸಿಕ್ಕಿದೆ. ಆ ಅಸ್ಥಿಪಂಜರವನ್ನು ಹಾಗೂ ಆ ಸ್ಥಳದಲ್ಲಿ ಸಿಕ್ಕ ಕೆಲವು ವಸ್ತುಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ಎಫ್‌ಎಸ್‌ಎಲ್ ವರದಿ ಬರುವ ತನಕ ಎಸ್‌ಐಟಿ ತನಿಖೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದರು.





