ಮಂಗಳೂರು : ಧರ್ಮಸ್ಥಳದಲ್ಲಿ ನೂರಾರು ಶವ ಹೂತಿದ್ದಾಗಿ ಸಾಕ್ಷಿ ದೂರುದಾರ ಹೇಳಿಕೆ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ (ಎಸ್‌ಐಟಿ) ತನಿಖೆಯನ್ನು ತೀವ್ರಗೊಳಿಸಿದೆ.
ಮೃತದೇಹಗಳ ಅವಶೇಷ ಪತ್ತೆಗಾಗಿ ನಡೆಯುತ್ತಿರುವ ಶೋಧ ಕಾರ್ಯಾಚರಣೆ ಮಂಗಳವಾರ 7ನೇ ದಿನಕ್ಕೆ ಕಾಲಿಟ್ಟಿತು. ನೇತ್ರಾವತಿ ಸ್ನಾನಘಟ್ಟದ ಬಳಿಯ ಕಾಡಿನಲ್ಲಿ ಸಾಕ್ಷಿ ದೂರುದಾರ ಈ ಹಿಂದೆ ಗುರುತಿಸಿದ್ದ 11ನೇ ಸ್ಥಳದಲ್ಲಿ ಎಸ್‌ಐಟಿ ಶೋಧ ಕಾರ್ಯ ನಡೆಸಿತು. ಈ ಹಿಂದೆ ತೋರಿಸಿದ್ದ 11ನೇ ಜಾಗಕ್ಕಿಂತ ಮುಂದಕ್ಕೆ ಕಾಡಿನೊಳಗೆ ಎಸ್‌ಐಟಿ ಅಧಿಕಾರಿಗಳನ್ನು ಕರೆದೊಯ್ದಿದ್ದು, ಅಲ್ಲಿ ನೆಲದ ಮೇಲೆಯೇ ಅಸ್ಥಿಪಂಜರದ ಅವಶೇಷಗಳು ಸಿಕ್ಕಿವೆ ಎಂದು ತಿಳಿದುಬಂದಿದೆ.
ಈ ಅಸ್ಥಿಪಂಜರಗಳನ್ನು ತಜ್ಞರ ತಂಡ ವೈಜ್ಞಾನಿಕವಾಗಿ ಸಂಗ್ರಹ ಮಾಡಿದ್ದು, ಅದನ್ನು ಮಣಿಪಾಲದ ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ವಿಧಿವಿಜ್ಞಾನ ವಿಶ್ಲೇಷಣೆಗಾಗಿ ಕಳುಹಿಸಲಾಗಿದೆ. ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಹೆಣಗಳನ್ನು ಹೂತು ಹಾಕಿದ್ದೇನೆ ಎಂದು ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜು.4ರಂದು ಪ್ರಕರಣ ದಾಖಲಾದ ಬಳಿಕ ಈ ವಿಚಾರ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಜುಲೈ 19 ರಂದು ಪ್ರಕರಣದ ತನಿಖೆಗಾಗಿ ಎಸ್‌ಐಟಿಯನ್ನು ರಚಿಸಿತ್ತು.





