Mysore
18
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಧರ್ಮಸ್ಥಳ | ಮತ್ತೆ ಉತ್ಖನನ ಚಿಂತನೆ ನಡೆಸಿದ ಎಸ್‌ಐಟಿ

dharmasthala

ಬೆಂಗಳೂರು : ಧರ್ಮಸ್ಥಳ ಪ್ರಕರಣ ಮತ್ತಷ್ಟು ಕುತೂಹಲ ಕೆರಳಿಸಿದ್ದು, ರಜಾ ದಿನವನ್ನು ಲೆಕ್ಕಿಸದೆ ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಾಂತಿ ತನಿಖಾ ತಂಡದ ಜೊತೆ ಭಾನುವಾರ ಮಹತ್ವದ ಸಭೆ ನಡೆಸಿದ್ದಾರೆ.

ಸಾಮಾನ್ಯವಾಗಿ ಭಾನುವಾರ ತನಿಖೆ ಹಾಗೂ ವಿಚಾರಣೆಗೆ ಎಸ್‌ಐಟಿ ತಂಡ ವಿರಾಮ ನೀಡುತ್ತಿತ್ತು. ಆದರೆ ಸೌಜನ್ಯ ಅವರ ಮಾವ ವಿಠಲ್‌ಗೌಡ ಅವರ ಹೇಳಿಕೆ ಗಂಭೀರ ಸ್ವರೂಪಕ್ಕೆ ತಿರುಗಿದ್ದು, ಇದನ್ನು ಆಧರಿಸಿ, ಬಂಗ್ಲೆಗುಡ್ಡದಲ್ಲಿ ಉತ್ಖನನ ನಡೆಸಬೇಕೇ? ಬೇಡವೇ? ಎಂಬ ಬಗ್ಗೆ ಸುದೀರ್ಘ ಸಮಾಲೋಚನೆಯಾಗಿದೆ.

ಎಸ್‌ಐಟಿ ತಂಡದ ತನಿಖಾಧಿಕಾರಿ ಜಿತೇಂದ್ರಕುಮಾರ್ ದಯಾಮ, ಸಿ.ಎ.ಸೈಮನ್ ಮತ್ತಿತರರು ಸಭೆಯಲ್ಲಿದ್ದರು. ನೇತ್ರಾವತಿ ದಂಡೆಯಲ್ಲಿರುವ ಬಂಗ್ಲೆಗುಡ್ಡ ಕಾಡಿನಲ್ಲಿ ಮಾನವ ಅವಶೇಷಗಳ ರಾಶಿಯೇ ದೊರೆತಿದೆ ಎಂದು ವಿಠಲ್‌ಗೌಡ ಹೇಳಿಕೆ ನೀಡಿದರು. ತಮ್ಮನ್ನು ಅಲ್ಲಿಗೆ ಎಸ್‌ಐಟಿ ತಂಡ ಕರೆದುಕೊಂಡು ಹೋದಾಗ ಮೊದಲ ದಿನ ೫ ಹಾಗೂ ಎರಡನೇ ದಿನ ೩ ಅಸ್ಥಿಪಂಜರಗಳನ್ನು ನೋಡಿದ್ದಾಗಿ ವಿಠಲ್‌ಗೌಡ ಹೇಳಿದರು. ಅಸ್ಥಿಪಂಜರಗಳ ಪೈಕಿ ಚಿಕ್ಕ ಮಗುವಿನ ಕಳೇಬರವನ್ನು ತಾವು ಕಂಡಿದ್ದಾಗಿ ತಿಳಿಸಿದರು.

ಇದು ಭಾರೀ ಸಂಚಲನ ಮೂಡಿಸಿತ್ತು. ಈ ಹಿಂದೆ ಚಿನ್ನಯ್ಯ ಇದೇ ರೀತಿಯ ಹೇಳಿಕೆ ನೀಡಿ, ಭಾರೀ ಗೊಂದಲ ಮೂಡಿಸಿದ್ದರು. ಆತ ಗುರುತಿಸಿದ ಜಾಗದಲ್ಲಿ ಎಸ್‌ಐಟಿ ಉತ್ಖನನ ನಡೆಸಿದಾಗ ಹೆಚ್ಚಿನ ಅಸ್ಥಿಪಂಜರಗಳು ದೊರೆಯದ ಕಾರಣಕ್ಕೆ ಪ್ರಯತ್ನ ವ್ಯರ್ಥವಾಗಿತ್ತು. ತಪ್ಪ ಮಾಹಿತಿ ನೀಡಿ, ಧರ್ಮಸ್ಥಳದ ವಿರುದ್ಧ ಅಪಪ್ರಚಾರಕ್ಕೆ ಕಾರಣವಾಗಿದ್ದ ಚಿನ್ನಯ್ಯನನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.

ಈಗ ಸೌಜನ್ಯ ಅವರ ಮಾವ ವಿಠಲ್‌ಗೌಡ ಅದೇ ಮಾದರಿಯಲ್ಲಿ ಹೇಳಿಕೆಗಳನ್ನು ನೀಡಿ ಭಾರೀ ಚರ್ಚೆಗೆ ಗ್ರಾಸವಾಗಿದ್ದಾರೆ. ಬಂಗ್ಲೆಗುಡ್ಡದಲ್ಲಿ ಮಾನವ ಅಸ್ಥಿಪಂಜರಗಳಿವೆ ಎಂದು ಹೇಳಿರುವ ವಿಠಲ್‌ಗೌಡ ಅವರ ಹೇಳಿಕೆ ಆಧರಿಸಿಯೇ ಭಾನುವಾರದ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.

ಎಸ್‌ಐಟಿ ಮುಖ್ಯಸ್ಥರಾದ ಪ್ರಣಬ್ ಮೊಹಾಂತಿ ಭಾನುವಾರ ಬೆಳ್ತಂಗಡಿಗೆ ಭೇಟಿ ನೀಡಿ, ತನಿಖಾ ತಂಡದ ಜೊತೆ ಸುದೀರ್ಘ ಸಮಾಲೋಚನೆ ನಡೆಸಿದ್ದರು. ಇದೇ ಸಂದರ್ಭದಲ್ಲಿ ಈವರೆಗಿನ ತನಿಖೆಯ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಅದರ ಜೊತೆಗೆ ಬಂಗ್ಲೆಗುಡ್ಡದಲ್ಲಿ ಉತ್ಖನನ ನಡೆಸುವ ಬಗ್ಗೆಯೂ ಚರ್ಚೆಗಳಾಗಿವೆ ಎಂದು ತಿಳಿದು ಬಂದಿದೆ.

Tags:
error: Content is protected !!