Mysore
20
overcast clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಧರ್ಮಸ್ಥಳ ರಹಸ್ಯ | ದೂರುದಾರ ಮಾಸ್ಕ್‌ಮ್ಯಾನ್‌ ಬಂಧನಕ್ಕೆ ಕಾರಣವೇನು?

ಬೆಂಗಳೂರು : ಧರ್ಮಸ್ಥಳದಲ್ಲಿ 17 ಸ್ಥಳಗಳಲ್ಲಿ ಉತ್ಖನನ ನಡೆಸಿ ಜಿಪಿಆರ್‌ ಯಂತ್ರದಿಂದ ಶೋಧ ಕಾರ್ಯದ ಬಳಿಕವೂ ಯಾವ ಪ್ರಮುಖ ಅಂಶಗಳೂ ಪತ್ತೆಯಾಗದ ಹಿನ್ನಲೆಯಲ್ಲಿ, ಕಳೆದ ಭಾನುವಾರವೇ ದೂರುದಾರನನ್ನು ಆರೋಪಿ ಎಂದು ಪರಿಗಣಿಸಿ ಬಂಧಿಸಲು ಎಸ್‌‍ಐಟಿ ಸಿದ್ಧತೆ ಮಾಡಿಕೊಂಡಿತ್ತು. ಆದರೆ ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದ ಕಾರಣಕ್ಕೆ ವಿಳಂಬ ಮಾಡಿದ್ದಾಗಿ ತಿಳಿದು ಬಂದಿದೆ.

ದೂರುದಾರನಾಗಿರುವ ಮಾಸ್ಕ್‌ಮ್ಯಾನ್‌ ಸಿ.ಎನ್‌. ಚಿನ್ನಯ್ಯ ಕಳೆದ ಶನಿವಾರವೇ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದ. ಹೀಗಾಗಿ ಆತನನ್ನು ಮಾರನೇ ದಿನವೇ ಬಂಧಿಸಲು ಎಸ್‌‍ಐಟಿ ಅಧಿಕಾರಿಗಳು ತಯಾರಾಗಿದ್ದರು. ಆದರೆ ಇನ್ನಷ್ಟು ಸ್ಪಷ್ಟನೆ ಅಗತ್ಯ ಇದ್ದುದ್ದರಿಂದಾಗಿ ವಿಚಾರಣೆ ಮುಂದುವರೆಸಲಾಯಿತು. ಒಂದು ವೇಳೆ ಅಂದೇ ಬಂಧಿಸಿದ್ದರೇ ವಿಧಾನಮಂಡಲ ಅಧಿವೇಶನದಲ್ಲಿ ಮತ್ತಷ್ಟು ಗದ್ದಲವಾಗಿ ಸರ್ಕಾರಕ್ಕೆ ಮುಜುಗರವಾಗುವ ಸಾಧ್ಯತೆ ಇದ್ದಿದ್ದರಿಂದ ತಡ ಮಾಡಿದ್ದಾಗಿ ತಿಳಿದು ಬಂದಿದೆ.

ಸಿ.ಎನ್‌. ಚೆನ್ನಯ್ಯನನ್ನು ಎಸ್‌‍ಐಟಿಯ ಮುಖ್ಯಸ್ಥ ಪ್ರಣಬ್‌ ಮೊಹಾಂತಿ, ನಿನ್ನೆ 18 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು. ಈ ವೇಳೆ ಆತ ತಾನು ತಲೆಬುರುಡೆಯನ್ನು ಎಲ್ಲಿಂದ ತಂದಿದ್ದೇನೆ ಎಂಬ ವಿಚಾರವನ್ನು ಸ್ಪಷ್ಟವಾಗಿ ತಿಳಿಸದೆ ಗೊಂದಲದ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.

ಈ ಹಿಂದೆ ನಾನು ತಮಿಳುನಾಡಿನ ಈರೋಡ್‌ನಲ್ಲಿದ್ದೆ. ಉಜಿರೆಯ ಪಂಚಾಯತ್‌ನಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡಿದ್ದೆ. ಆ ಬಳಿಕ ಧರ್ಮಸ್ಥಳದಲ್ಲಿ ನೈರ್ಮಲೀಕರಣ ಕೆಲಸ ಮಾಡುತ್ತಿದ್ದೆ. ಅಲ್ಲಿ ಕೆಲಸ ಬಿಟ್ಟ ಬಳಿಕ 2014 ರಿಂದಲೂ ಮತ್ತೇ ತಮಿಳುನಾಡಿನಲ್ಲಿ ನೆಲೆಸಿದ್ದೆ ಎಂದು ತಿಳಿಸಿರುವುದಾಗಿ ತಿಳಿದು ಬಂದಿದೆ.

2023ಲ್ಲಿ ಕೆಲವರು ನನ್ನನ್ನು ಸಂಪರ್ಕಿಸಿ ಧರ್ಮಸ್ಥಳದಲ್ಲಿ ಶವಗಳನ್ನು ಹೂತು ಹಾಕಿರುವ ಬಗ್ಗೆ ಮಾಹಿತಿ ಕೇಳಿದರು. ಎಲ್ಲಾ ಶವಗಳನ್ನು ಕಾನೂನು ಬದ್ಧವಾಗಿಯೇ ಸಂಸ್ಕಾರ ಮಾಡಿದ್ದೇನೆ ಎಂದು ನಾನು ತಿಳಿಸಿದ್ದೆ. 2024ರ ವೇಳೆಗೆ ನನ್ನನ್ನು ಕರ್ನಾಟಕಕ್ಕೆ ಕರೆ ತಂದ ಗುಂಪು ನೂರಾರು ಶವಗಳನ್ನು ಹೂತುಹಾಕಿರುವುದಾಗಿ ಹೇಳಿ ಪೊಲೀಸರಿಗೆ ಶರಣಾಗುವಂತೆ ಸೂಚಿಸಿತ್ತು. ಅವರು ಕೊಟ್ಟ ತಲೆಬುರುಡೆಯನ್ನು ತಂದು ಪೊಲೀಸರಿಗೆ ನೀಡಿದ್ದಾಗಿ ಹೇಳಿದ್ದಾನೆ.
ಆರಂಭದಲ್ಲಿ ನನಗೆ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಲು ಅಳುಕಿತ್ತು. ಸುಜಾತಭಟ್‌ ತಮ ಮಗಳು ಕಾಣೆಯಾಗಿರುವ ಬಗ್ಗೆ ದೂರು ನೀಡಿದ ಬಳಿಕ ನನಗೆ ಧೈರ್ಯ ಬಂತು. ನ್ಯಾಯಾಧೀಶರ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದೆ ಎಂದು ಸ್ಪಷ್ಟಪಡಿಸಿದ್ದಾನೆ ಎನ್ನಲಾಗಿದೆ.

ಪೊಲೀಸರ ವಿಚಾರಣೆ ಸಂದರ್ಭದಲ್ಲಿ ಯಾವ ರೀತಿ ಹೇಳಿಕೆ ನೀಡಬೇಕು ಎಂದು ಮೂವರು ವ್ಯಕ್ತಿಗಳು ನನಗೆ ಹಲವಾರು ಬಾರಿ ತರಬೇತಿ ನೀಡಿದ್ದರು ಎಂದು ಚಿನ್ನಯ್ಯ ಪೊಲೀಸರ ವಿಚಾರಣೆ ವೇಳೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.

ನಾನು ಪಾತ್ರದಾರ ಮಾತ್ರ. ಸೂತ್ರದಾರರು ಬೇರೆ ಇದ್ದಾರೆ. ಅವರು ಹೇಳಿಕೊಟ್ಟಂತೆ ನಾನು ಮಾಡಿದ್ದೇನೆ ಎಂದು ಆರೋಪಿ ವಿಚಾರಣೆ ಸಂದರ್ಭದಲ್ಲಿ ಹೇಳಿರುವುದಾಗಿ ತಿಳಿದು ಬಂದಿದೆ.

Tags:
error: Content is protected !!