ಮಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಧರ್ಮಸ್ಥಳದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿರುವುದರಿಂದ ಸತ್ಯ ಹೊರಬರುತ್ತಿದೆ. ಸರ್ಕಾರಕ್ಕೆ ನಾನು ಆಭಾರಿಯಾಗಿದ್ದೇನೆ. ಎಸ್‌ಐಟಿ ರಚನೆ ಮಾಡಿ ತನಿಖೆ ನಡೆಸುತ್ತಿರುವುದರಿಂದ ಸತ್ಯ ಹೊರಬರುತ್ತಿದೆ ಎಂದು ಹೇಳಿದರು.
ಇಷ್ಟು ಹಗೆತನ, ಅಪವಾದ ಯಾಕೆ ಬಂತು ಎಂದು ನಮಗೆ ಗೊತ್ತಿಲ್ಲ. ನಾವು ಸೇವೆ ಮಾಡುತ್ತೇವೆ. ಆದರೆ ಸೇವೆ ಪ್ರಚಾರದ ವಸ್ತುವಲ್ಲ. ಇಷ್ಟು ವರ್ಷಗಳ ಕಾಲ ನಾವು ಆರೋಗ್ಯವಾಗಿರಲು ನಮ್ಮ ನಿಸ್ವಾರ್ಥ ಸೇವೆಯೇ ಕಾರಣ. ನಮ್ಮ ಎಲ್ಲಾ ಕಾರ್ಯಕ್ರಮಗಳನ್ನು ನೀವೆಲ್ಲಾ ಗಮನಿಸಿದ್ದೀರಿ ಎಂದರು.
ಇದನ್ನು ಓದಿ : ಧರ್ಮಸ್ಥಳ ಕೇಸ್‌ಗೆ ಬಿಗ್ ಟ್ವಿಸ್ಟ್: ಬಂಗ್ಲೆಗುಡ್ಡ ಕಾಡಿನಲ್ಲಿ ರಾಶಿ ರಾಶಿ ಮೂಳೆಗಳು ಪತ್ತೆ?
ನಾನು ಹಲವಾರು ಪುಸ್ತಕಗಳನ್ನು ಓದುತ್ತಿದ್ದೇನೆ. ಸಿದ್ಧಗಂಗಾ ಶ್ರೀಗಳ ಹಲವು ಪುಸ್ತಕಗಳನ್ನು ಓದಿದ್ದೇನೆ. ಸಿದ್ಧಗಂಗಾ ಶ್ರೀಗಳು ನಮ್ಮ ಸೇವೆ ಧರ್ಮ ನಮಗೆ ಮುಖ್ಯ ಎಂದು ಹೇಳಿದ್ದರು. ಅದನ್ನು ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ.
ಧರ್ಮಸ್ಥಳ ಬೇರೆ, ಧರ್ಮಸ್ಥಳ ಊರಿನವರು ಬೇರೆ ಅಲ್ಲ. ಎಷ್ಟು ನಿಷ್ಟುರವಾಗಿ ನಮ್ಮ ಮೇಲೆ ದಬ್ಬಾಳಿಕೆ ನಡೆದಿದೆ ನೀವು ನೋಡಿದ್ದೀರಿ. ಯಾಕಿಷ್ಟು ದ್ವೇಷ ನನ್ನ ಮೇಲೆ ಇದೆ? ನನಗೆ ಗೊತ್ತಿಲ್ಲ. ಈಗ ಮನಸ್ಸು ಸ್ವಲ್ಪ ಹಗುರವಾಗಿದೆ. ನಮ್ಮ ಮೇಲೆ ದೃಢನಂಬಿಕೆ ಇಟ್ಟ ಎಲ್ಲರಿಗೂ ಧನ್ಯವಾದ. ನಾವು ತಪ್ಪು ಮಾಡದ ಕಾರಣ ನಮಗೆ ಆತ್ಮವಿಶ್ವಾಸವಿದೆ. ಎಸ್‌ಐಟಿ ವರದಿ ಅರ್ಧ ಬಂದ ಕಾರಣ ಇಷ್ಟು ಮಾತನಾಡುತ್ತಿದ್ದೇನೆ. ಎಲ್ಲವನ್ನೂ ಮಂಜುನಾಥಸ್ವಾಮಿ, ಅಣ್ಣಪ್ಪಸ್ವಾಮಿ ನೋಡಿಕೊಳ್ಳುತ್ತಾರೆ. ನಾವು ಸತ್ಯದಿಂದ ಇದ್ದೇವೆ ಎಂದು ಹೇಳಿದರು.





