ಬೆಂಗಳೂರು : ರಾಜ್ಯಾದ್ಯಂತ ಭಾರೀ ಸಂಚಲನ ಸೃಷ್ಟಿಸಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಸಾಮೂಹಿಕ ಅಸಹಜ ಸಾವು ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರ ರಚಿಸಿರುವ ಎಸ್‌ಐಟಿ ತಂಡಕ್ಕೆ ಇನ್ನೂ 20 ಮಂದಿ ಅಧಿಕಾರಿಗಳನ್ನು ನೇಮಕ ಮಾಡಿದೆ. ವ್ಯಾಪಕ ಸಾರ್ವಜನಿಕ ಆಕೋಶಕ್ಕೆ ಕಾರಣವಾಗಿರುವ ಗೊಂದಲದ ಆರೋಪಗಳ ಬಗ್ಗೆ ಈ ತಂಡವು ಸಮಗ್ರ ತನಿಖೆ ನಡೆಸಲಿದೆ.
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗಿರುವ ಅಸಹಜ ಸಾವುಗಳ ಕುರಿತಾಗಿ ಕೇಳಿ ಬಂದ ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ರಾಜ್ಯ ಸರ್ಕಾರ ಡಾ.ಪ್ರಣವ್ ಮೊಹಂತಿ ನೇತೃತ್ವದಲ್ಲಿ ಎಸ್‌ಐಟಿಯನ್ನು ರಚನೆ ಮಾಡಿ ಆದೇಶ ಹೊರಡಿಸಿದೆ. ಅನುಚೇತ್, ಸೌಮ್ಯಲತಾ, ಜಿತೇಂದ್ರಕುಮಾರ್ ಇದರ ಸದಸ್ಯರಾಗಿದ್ದಾರೆ.
ಈ ತಂಡಕ್ಕೆ ಇದೀಗ 1 ಎಸ್ಪಿ, 2 ಡಿಎಸ್ಪಿ, 4 ಪೊಲೀಸ್ ಇನ್‌ಸ್ಪೆಕ್ಟರ್, 1 ಸಿಪಿಐ, 7 ಪಿಎಸ್‌ಐ, 1 ಎಎಸ್‌ಐ ಮತ್ತು 4 ಮುಖ್ಯ ಪೇದೆಗಳನ್ನು ನಿಯೋಜಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಂದ ಆಯ್ಕೆಯಾದ ಈ ಅಧಿಕಾರಿಗಳು ಡಿಸಿಆರ್, ಕರಾವಳಿ ಭದ್ರತಾ ಪೊಲೀಸ್, ಮೆಸ್ಕಾಂ ಮತ್ತು ಎಫ್‌ಎಂಎಸ್ ವಿಭಾಗಗಳಿಂದ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ.
ಡಿಜಿ-ಐಜಿಪಿ ಡಾ.ಎಂ.ಎ.ಸಲೀಂ ಅವರಿಂದ ಈ ತಂಡಕ್ಕೆ ಅಧಿಕೃತ ಆದೇಶವನ್ನು ಹೊರಡಿಸಲಾಗಿದ್ದು, ತನಿಖೆಯ ಪ್ರಗತಿಯನ್ನು ನಿಯಮಿತವಾಗಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ವರದಿಯಾಗಿ ಸಲ್ಲಿಸಲಾಗುವುದು. ಈ ತಂಡವು ಧರ್ಮಸ್ಥಳ ಪೊಲೀಸ್ ಠಾಣೆಯಿಂದ ಪ್ರಕರಣದ ವಿವರಗಳನ್ನು ಸಂಗ್ರಹಿಸಿ, ಸ್ಥಳ ಪರಿಶೀಲನೆ, ಸಾಕ್ಷಿಗಳ ವಿಚಾರಣೆ ಮತ್ತು ಅಸ್ಥಿಪಂಜರಗಳ ಡಿಎನ್‌ಎ ಪರೀಕ್ಷೆಯನ್ನು ನಡೆಸಲಿದೆ.
ಎಸ್‌ಐಟಿ ತಂಡವು ಈಗ ಧರ್ಮಸ್ಥಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶವಗಳ ದಫನ್ ಸ್ಥಳಗಳನ್ನು ಗುರುತಿಸಲು ಮತ್ತು ಅಸ್ಥಿಪಂಜರಗಳ ವೈದ್ಯಕೀಯ ಪರೀಕ್ಷೆಯನ್ನು ನಡೆಸಲು ಕಾರ್ಯಪ್ರವೃತ್ತವಾಗಿದೆ. ಪೊಲೀಸ್ ದಾಖಲೆಗಳ ಜೊತೆಗೆ, ಸಾಕ್ಷಿಗಳ ಹೇಳಿಕೆ ಮತ್ತು ಸ್ಥಳೀಯರ ಸಹಕಾರದೊಂದಿಗೆ ಈ ಪ್ರಕರಣವನ್ನು ಭೇದಿಸಲು ಕೆದಕಲು ತಂಡವು ಸಿದ್ಧತೆ ನಡೆಸಿದೆ. ಈ ತನಿಖೆಯ ಫಲಿತಾಂಶವು ಈ ಗಂಭೀರ ಆರೋಪಗಳ ಸತ್ಯಾಸತ್ಯತೆಯನ್ನು ಬೆಳಕಿಗೆ ತರಲಿದೆ ಎಂಬ ನಿರೀಕ್ಷೆಯಿದೆ.





